ನರೇಗಾ ಕೂಲಿಕಾರರಿಗೆ ಇ-ಕೆವೈಸಿ ಕಡ್ಡಾಯ: ಅಕ್ಟೋಬರ್ 30 ಅಂತಿಮ ಗಡುವು
ಬಂಟ್ವಾಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಕ್ರಿಯ ಉದ್ಯೋಗ ಚೀಟಿ ಹೊಂದಿರುವ ಕೂಲಿಕಾರರುಇ-ಕೆವೈಸಿ ಪ್ರಕ್ರಿಯೆಯನ್ನು ಅ. 30 ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಲು ಗಡುವು ನೀಡಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಪ್ರಕಟಣೆ ತಿಳಿಸಿದೆ.

ಈ ಯೋಜನೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಕೂಲಿ ಹಣ ಸಂದಾಯವಾಗುವುದನ್ನು ಖಚಿತಪಡಿಸುವ ಉದ್ದೇಶದಿಂದ, ಆಧಾರ್ ಆಧಾರಿತ ಕಡ್ಡಾಯ ಇ-ಕೆವೈಸಿ ಪ್ರಕ್ರಿಯೆಯನ್ನು ಸರಕಾರ ಜಾರಿಗೊಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಗಡುವು ಮತ್ತು ಕಡ್ಡಾಯತೆ:
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಸುತ್ತೋಲೆಯ ಪ್ರಕಾರ, ನರೇಗಾ ಯೋಜನೆಯಲ್ಲಿ ಸಕ್ರಿಯವಾಗಿರುವ ಪ್ರತಿಯೊಬ್ಬ ಕೂಲಿಕಾರರು ಈ ಗಡುವಿನೊಳಗೆ ಪ್ರಕ್ರಿಯೆ ಮುಗಿಸದಿದ್ದರೆ, ಉದ್ಯೋಗ ಚೀಟಿದಾರರು ಯೋಜನೆಯ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ತಾ.ಪಂ.ಪ್ರಕಟಣೆ ತಿಳಿಸಿದೆ.
ಇ-ಕೆವೈಸಿ ಪ್ರಕ್ರಿಯೆ ಹೇಗೆ?:
ಸರಳ ಕಾಗದಪತ್ರಗಳ ಪರಿಶೀಲನೆ ಬದಲಿಗೆ ಮುಖದ ಗುರುತಿಸುವಿಕೆ ಮೂಲಕ ಮಾಡಲಾಗುತ್ತದೆ.
ಆ್ಯಪ್ ಬಳಕೆ: ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ (ಎನ್ ಎಂಎಂಎಸ್) ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಕೆವೈಸಿ ನಡೆಯುತ್ತದೆ. ತಮ್ಮ ಮುಖದ ಗುರುತಿಸುವಿಕೆ ಯನ್ನು ಎನ್ ಎಂಎಂಎಸ್ ಅಪ್ಲಿಕೇಶನ್ ಮೂಲಕ ಮಾಡಿಸಬೇಕು. ಇದರ ಮೂಲಕ, ಅವರ ಆಧಾರ್ ಸಂಖ್ಯೆ ಮತ್ತು ಇತರ ವಿವರಗಳು ದೃಢೀಕೃತಗೊಳ್ಳುತ್ತವೆ. ಎಲ್ಲಾ ಸಕ್ರಿಯ ನರೇಗಾ ಫಲಾನುಭವಿಗಳು ತಮ್ಮ ಹತ್ತಿರದ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ಸಹಾಯದೊಂದಿಗೆ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.



