ಬಂಟ್ವಾಳ: ತಾಲೂಕಿನ ಕಾವಳಮೂಡೂರು ಗ್ರಾಮದ   ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ ಆಚರಣೆ ಪ್ರಯುಕ್ತ ಕದಿರು ಉತ್ಸವ ಕಾರ್ಯಕ್ರಮ ಬುಧವಾರ ಸಂಭ್ರಮದಿಂದ ನಡೆಯಿತು.

  ವರ್ಷಂಪ್ರತಿ ಸಂಪ್ರದಾಯ ಪ್ರಕಾರ  ಕನ್ಯಾ ಸಂಕ್ರಮಣದ ಮರು ದಿವಸ ನಡೆಯುವ  ತೆನೆ ಹಬ್ಬ ಆಚರಣೆಗಾಗಿ ಕಾರಿಂಜದಿಂದ ಸುಮಾರು ೯ ಕಿ.ಮೀ. ದೂರವಿರುವ ಸರಪಾಡಿಯ ಹಲ್ಲಂಗಾಲು   ಗದ್ದೆಯೊಂದರಿಂದ ತೆನೆಗಳನ್ನು ತರಲಾಯಿತು.  ಬೆಳಗ್ಗೆ ಸೂರ್ಯೋದಯದ ಮುಂಚೆ ಶ್ರೀ ಕ್ಷೇತ್ರ ಕಾರಿಂಜದಿಂದ ವಾದ್ಯಗೋಷ್ಠಿ ಸಹಿತವಾಗಿ ಅರ್ಚಕರು, ತಂತ್ರಿಗಳು, ಗ್ರಾಮಣಿಗಳು,ಮುಖ್ಯಸ್ಥರು ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟು ದಾರಿಯಲ್ಲಿ ಸಿಗುವಂತ  ಏಳು ಕಟ್ಟೆಗಳಾದ  ಶೇಡಿಮೆ ಕಟ್ಟೆ, ದಂಡ್ಯೊಟ್ಟು ಕಟ್ಟೆ, ದೇವಶ್ಯ ಕಟ್ಟೆ, ಸೂಳ್ದು ಕಟ್ಟೆ, ಭಂಡಾರಿಕಟ್ಟೆ, ಸಮಗಾರನ ಕಟ್ಟೆ ಮತ್ತು ಹಲ್ಲಂಗಾರ್ ಕಟ್ಟೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ  ಪ್ರಸಾದ ನೀಡಲಾಯಿತು. 

ಕೊನೆಯ ಕಟ್ಟೆ ಹಲ್ಲಂಗಾರು ಕಟ್ಟೆಯನ್ನು ಈಶ್ವರ ಸನ್ನಿಧಿ ಎಂದು ಪರಿಗಣಿಸಿ ದರ್ಶನ ಬಲಿ ಸಹಿತ ಪೂಜೆ ನಡೆಯಿತು. ಬಳಿಕ ಸಮೀಪದಲ್ಲಿ ಬಂಗಾರದ ತೆನೆ ಬೆಳೆಯಿತೆನ್ನಲಾದ ಜೈನ ಮನೆತನದ ಲೀಲಾವತಿ ಅಮ್ಮ ಅವರ ಕಂಬಳದ ಗದ್ದೆಯಿಂದ ತೆನೆ ತಂದು ಅದನ್ನು ಹೊಸ ವಸ್ತ್ರದಲ್ಲಿ ಹೊದಿಸಿ ಸಮರ್ಪಿಸಲಾಯಿತು. 

 ನಂತರ ಶ್ರೀ ಕ್ಷೇತ್ರ ಕಾರಿಂಜಕ್ಕೆ ತಂದು ಲಕ್ಷ್ಮೀ ಪೂಜೆ ನಡೆಸಿ ದೇವಸ್ಥಾನಕ್ಕೆ ತೆನೆ ಕಟ್ಟಲಾಯಿತು.  ಕಾರ್ಯಕ್ರಮದಲ್ಲಿ ಪರಿಸರದ ಭಕ್ತರು ಶ್ರದ್ಧಾ, ಭಕ್ತಿಯಿಂದ ಭಾಗವಹಿಸಿದರು. ಮಿಥುನ್ ರಾಜ್ ನಾವಡ, ಶ್ಯಾಂ ಭಟ್, ಮಹೇಶ್ ಮಯ್ಯ ಅವರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಗಳು ನೆರವೇರಿತು.
ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ.ಅಮೀನ್,   ಸಮಿತಿ ಸದಸ್ಯರಾದ ಪ್ರಶಾಂತ್, ರಾಧಾ ಆಚಾರ್ಯ, ಧನಲಕ್ಷ್ಮಿ ಸಿ.ಬಂಗೇರ,ಎಂ.ಉದಯ ನಾಯಕ್, ಪ್ರೇಮನಾಥ ಪೀರ‍್ಯಗುತ್ತು, ಜನಾರ್ದನ ಆಚಾರ್ಯ ಬಾಳ್ತಬಲು, ದಯಾನಂದ ಶೆಟ್ಟಿ ಅಮೈ,  ದೇವಸ್ಥಾನದ ಮ್ಯಾನೇಜರ್ ವಿನಯ ಕುಮಾರ್ ಮತ್ತು ಸಿಬಂದಿವರ್ಗ, ಮತ್ತಿತರರು  ಉಪಸ್ಥಿತರಿದ್ದರು.  
 ಸುತ್ತಲಿನ ಗ್ರಾಮಗಳಾದ ಸರಪಾಡಿ, ಮಣಿನಾಲ್ಕೂರು ಗ್ರಾಮಸ್ಥರು  ಈ ತೆನೆ ಹಬ್ಬದಲ್ಲಿ ಭಾಗವಹಿಸಿ ತಮ್ಮ ವ್ಯಾಪ್ತಿಯ ಕಟ್ಟೆಗಳಿಂದ ತೆನೆ ಸಂಗ್ರಹಿಸಿ ಮನೆ ತುಂಬಿಸಿ ಹೊಸ ಅಕ್ಕಿ ಊಟ ಮಾಡುವ ಸಂಪ್ರದಾಯವಿದೆ

By suddi9

Leave a Reply

Your email address will not be published. Required fields are marked *