ಕೆತ್ತಿಕಲ್ ಒಳರಸ್ತೆ ದುರಸ್ತಿ
ಕೈಕಂಬ: ಕೆತ್ತಿಕಲ್‌ನಿಂದ ಹೆದ್ದಾರಿಗೆ ಹೊಂದಿಕೊಂಡಿರುವ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಹೋಗುವ ಒಳರಸ್ತೆ ಈ ಬಾರಿಯ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತದಿಂದ ಸಂಪೂರ್ಣ ಹಾನಿಗೀಡಾಗಿದ್ದು, ಸಾರ್ವಜನಿಕರಿಗೆ ಪ್ರಯೋಜನವಾಗುವ ದೃಷ್ಟಿಯಿಂದ ಸೆ. ೧೫ರಂದು ಸ್ಥಳೀಯ ಉದ್ಯಮಿ/ಸಮಾಜಸೇವಕ ರಘು ಸಾಲ್ಯಾನ್ ಅವರು ಈ ರಸ್ತೆ ದುರಸ್ತಿಗೆ ಸಹಕರಿಸಿದರು.

ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಕಂಪೆನಿಯಿಂದ ಜಲ್ಲಿ-ಸಿಮೆಂಟ್ ಮಿಕ್ಸ್ ಪಡೆದುಕೊಂಡ ಸಾಲ್ಯಾನ್ ಅವರು, ತನ್ನದೇ ಐದಾರು ಕೆಲಸದಾಳುಗಳ ನೆರವಿನಿಂದ ರಸ್ತೆ ದುರಸ್ತಿ ಕಾರ್ಯ ನಡೆಸಿದರು. ಮಳೆಗಾಲದಲ್ಲಿ ಕೆತ್ತಿಕಲ್ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದರೆ, ಒಳರಸ್ತೆ ಭೂಕುಸಿತಕ್ಕೊಳಗಾಗಿ ವಾಹನ ಸಂಚಾರ ಮತ್ತು ನಾಗರಿಕರಿಗೆ ನಡೆದಾಡಲು ಸಾಧ್ಯವಾಗದಷ್ಟು ಹಾನಿಗೀಡಾಗಿತ್ತು. ಸಾಲ್ಯಾನ್ ಅವರ ಕೆಲಸಕ್ಕೆ ಸ್ಥಳೀಯ ನಿವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ



