ಬಂಟ್ವಾಳ: ಯೋಗ್ಯವಾದ ಜೀವನಶೈಲಿ, ಧೈರ್ಯ, ಆತ್ಮವಿಶ್ವಾಸವಿದ್ದರೆ ಉತ್ತಮ ನಾಯಕತ್ವದ ಜೊತೆಗೆ ಎತ್ತರಕ್ಕೆ ಬೆಳೆಯಲು ಸಾಧ್ಯ. ತಮ್ಮ ನಾಯಕತ್ವವನ್ನು ಉತ್ತಮ ಸಂಘಟನೆ ಹಾಗೂ ನಮ್ಮತನದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಗುರುವಾರ ಕಲ್ಲಡ್ಕಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಪ್ರಣವ ವಿದ್ಯಾರ್ಥಿ ಸಂಘ, ಪ್ರಜ್ಞಾನ ಸಾಹಿತ್ಯ ಸಂಘ ಹಾಗೂ ಪ್ರಬೋಧ ವಾಣಿಜ್ಯ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಎಲ್ಲಾ ಸಂಗತಿಗಳಲ್ಲಿಯೂ ದೈವತ್ವವನ್ನು ಕಾಣುವ ನಮ್ಮ ಹೆಮ್ಮೆಯ ಹಿಂದೂಧರ್ಮ ಹಾಗೂ ದೇಶವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಭಾರತ ಉಳಿದರೆ ಮಾತ್ರ ಜಗತ್ತು ಉಳಿಯುವುದು ಎಂದರು

ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಚಂದ್ರಶೇಖರ ಚೆಂಡೆ ಕಮಲವನ್ನು ಅನಾವರಣಗೊಳಿಸುವ ಮೂಲಕ ಪ್ರಜ್ಞಾನ ಸಾಹಿತ್ಯ ಸಂಘ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ವಾಣಿಜ್ಯ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ಆರ್. ಚೆನ್ನಪ್ಪ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲರು, ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರಕಟ್ಟೆ ಅವರು ವಿದ್ಯಾರ್ಥಿಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಮತದಾನ ಸಾಕ್ಷರತಾ ಘಟಕದ ನಿರ್ದೇಶಕಿ ಆಶಾಲತಾ ಚುನಾವಣಾ ಪ್ರಕ್ರಿಯೆ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು. ಉಪನ್ಯಾಸಕಿಯರಾದ ಜಯಲಕ್ಷ್ಮಿ ಸ್ವಾಗತಿಸಿದರು, ಸಂಧ್ಯಾಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ಉಪ ಪ್ರಾಂಶುಪಾಲೆ ಸುಕನ್ಯಾ ವಂದಿಸಿದರು. ವಿದ್ಯಾರ್ಥಿ ಲಿಖಿತ್ ನಾಯಕ್ ಪ್ರಾರ್ಥಿಸಿದರು
