ಬಂಟ್ವಾಳ: ಮಂಗಳೂರಿನಲ್ಲಿ ರಾಜ್ಯ ಹೈಕೋಟ್೯ ಸಂಚಾರಿ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಪ್ರಭಾಕರಪ್ರಭು ಲಿಖಿತ ಮನವಿಮಾಡಿದ್ದಾರೆ.
ಮನವಿಯ ಪ್ರತಿಯನ್ನು ವಿಪಕ್ಷ ನಾಯಕರಿಗೂ ರವಾನಿಸಿ ಈ ಬಗ್ಗೆ ಸರಕಾರಕ್ಕೆ ಒತ್ತಡ ಹೇರುವಂತೆ ಒತ್ತಾಯಿಸಿದ್ದಾರೆ.ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನಸಾಮಾನ್ಯರ ಜಮೀನು ಸಂಬಂದಪಟ್ಟ ವ್ಯಾಜ್ಯಗಳು, ಸಂಘ ಸಂಸ್ಥೆಗಳ ಪ್ರಕರಣಗಳು, ಕ್ರಿಮಿನಲ್ ಪ್ರಕರಣ, ಸರಕಾರಿ ಅಧಿಕಾರಿಗಳಿಗೆ ಸಂಬಂಧ ಪಟ್ಟ ದೂರುಗಳು, ಸಿವಿಲ್ ಸಂಬಂದಿಸಿದ ಸೇರಿದಂತೆ ಇತರ ಎಲ್ಲಾ ತರಹದ ವ್ಯಾಜ್ಯಗಳು ಜಿಲ್ಲೆಗಳಲ್ಲಿನ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಮೇಲ್ಮನವಿ ಸಲ್ಲಿಸಲು ದೂರುದಾರರು ದೂರದ ಬೆಂಗಳೂರುನಲ್ಲಿರುವ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದರ ಪರಿಣಾಮ ಬಹುತೇಕ ಜನರಿಗೆ ಸಕಾಲಕ್ಕೆ ಮೇಲ್ಮನವಿ ಸಲ್ಲಿಸಲು ಕಷ್ಟ ಸಾಧ್ಯವಾಗಿದೆ.ಈಗಾಗಲೇ ಬೆಂಗಳೂರಿನಲ್ಲಿರುವ ಕೆಎಟಿ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಿರುವುದರಿಂದ ಈ ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳ ಬಗ್ಗೆ ಮೇಲ್ಮನವಿ ಸಲ್ಲಿಸಲು ಜನರಿಗೆ ಅನೂಕೂಲವಾಗಿದೆ .
ಈಗಾಗಲೇ ಹುಬ್ಬಳ್ಳಿ- ಧಾರವಾಡಗಳ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಧಾರವಾಡದಲ್ಲಿ ಹಾಗೂ ಉತ್ತರ ಕರ್ನಾಟಕ ಜನತೆಗೆ ಕಲ್ಬುರ್ಗಿಯಲ್ಲಿ ಸಂಚಾರಿ ಪೀಠ ಸ್ಥಾಪನೆ ಮಾಡಲಾಗಿದೆ.ಹಾಗಾಗಿ ಕರಾವಳಿ ಭಾಗದ ಜನತೆಯ ಅನುಕೂಲಕ್ಕಾಗಿ ಮಂಗಳೂರಿನ ಜಿಲ್ಲಾಧಿಕಾರಿ ಹಳೆಯ ಕಟ್ಟಡದಲ್ಲಿ ಉಚ್ಚ ನ್ಯಾಯಾಲಯ ಸಂಚಾರಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು ಎಂದು ಅವರು ಸಿಎಂ ಅವರಿಗೆ ಬರೆದ ಮನವಿಯಲ್ಲಿ ತಿಳಿಸಿದ್ದಾರೆ.
ವಿಪಕ್ಷ ನಾಯಕರುಗಳಾದ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣ ಸ್ವಾಮಿ ಅವರಿಗೂ ಪತ್ರದ ಪ್ರತಿಯನ್ನು ರವಾನಿಸಿರುವ ಪ್ತಭು ಅವರು ಈ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹಾಕುವಂತೆಯುಆಗ್ರಹಿಸಿದ್ದಾರೆ.
