ಬಂಟ್ಚಾಳ: ದ.ಕ.ಜಿ.ಪಂ.ಕೃಷಿ ಇಲಾಖೆ ಬಂಟ್ವಾಳ ಇದರ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ ಆತ್ಮ ಯೋಜನೆಯಡಿ “ಕಿಸಾನ್ ಗೋಷ್ಟಿ”, ಬೆಳೆ ಸಮೀಕ್ಷೆ ಆ್ಯಪ್ ಕುರಿತು ತರಬೇತಿ, ಕೃಷಿ ಸಲಕರಣೆ, ಸವಲತ್ತುಗಳ ವಿತರಣೆ,ಬೆಳೆ ಸಮೀಕ್ಷೆಯ ಕರಪತ್ರ ಬಿಡುಗಡೆ,”ಆತ್ಮಶ್ರೇಷ್ಠ” ಕೃಷಿಕ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಹಾಗೂ ತಾಲೂಕು ಮಟ್ಟದ ರೈತರಿಗೆ ಸನ್ಮಾನ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನಲ್ಲಿರುವ ತಾಲೂಕು ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಫಲಾನುಭವಿ ರೈತರಿಗೆ ಕೃಷಿ ಸಲಕರಣೆ,ಸವಲತ್ತನ್ನು ವಿತರಿಸಿ,ಪ್ರಶಸ್ತಿ ಪುರಸ್ಕೃತ ಕೃಷಿಕರನ್ನು ಸನ್ಮಾನಿಸಿ ಮಾತನಾಡಿ,ಕೃಷಿ ರೈತರಿಗೆ ತೃಪ್ತಿದಾಯಕವಾದ ಕಸಬಾಗಿದ್ದು,ಪ್ರಸ್ತುತ ತಾನು ಶಾಸಕನಾಗಿದ್ದರೂ ಕೃಷಿಕನಾಗಿ ಗುರುತಿಸಿಕೊಳ್ಳಲು ಅತ್ಯಂತ ಸಂತಸ ಮತ್ತು ಹೆಮ್ಮೆ ಇದೆ ಎಂದರು.

ಕೃಷಿಯನ್ನೇ ಜೀವನಾಧಾರವನ್ನಾಗಿರಿಸದೆ ಕೃಷಿಗೆ ಪೂರಕವಾಗಿರುವ ವ್ಯವಹಾರಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರ್ಥಿಕವಾಗಿಯು ಬಲಿಷ್ಠವಾಗಲು ಸಾಧ್ಯ,ಕೃಷಿಕರು ಆರ್ಥಿಕವಾಗಿ ಸಧೃಢವಾದಾಗ ದೇಶವು ಪ್ರಗತಿಯತ್ತ ಸಾಗುತ್ತದೆ ಎಂದ ಶಾಸಕರು ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕೃಷಿಗೆ ಪೂರಕವಾದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು,ಅದನ್ನು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಅತಿಥಿಯಾಗಿ ಭಾಗವಹಿಸಿದ್ದಬಂಟ್ವಾಳ ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿಕುಂದರ್ ಮಾತನಾಡಿ ಕೃಷಿಕರ ಶಕ್ತಿಯೇ ದೇಶದ ಶಕ್ತಿಯಾಗಿದ್ದು,ಗ್ರಾ.ಪಂ.ಮಟ್ಟದಲ್ಲಿಯು ಕೃಷಿಕರನ್ನು ಗುರುತಿಸಿ ಗೌರವಿಸವುದರ ಜತೆಗೆ ಕೃಷಿಗೆ ಪೂರಕವಾಗಿ ಮಾಹಿತಿ ನೀಡುವ ಕೆಲಸ ಅಧಿಕಾರಿಗಳಿಂದಾಗಬೇಕು ಎಂದರು.
ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಕುಮುದಾ,ಬಂಟ್ವಾಳ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ,ಕೃಷಿ ಅಧಿಕಾರಿ ನಂದನ್ ಶೆಣೈ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿಟ್ಲ ಸಿಪಿಸಿಆರ್ ಐನ ವಿಜ್ಞಾನಿ ಡಾ.ಮಧು ಅವರು ಮಾಹಿತಿ ನೀಡಿದರು.
ತಾಂತ್ರಿಕ ವ್ಯವಸ್ಥಾಪಕಿ ದೀಶಾ ಸನ್ಮಾನಿತರ ಪಟ್ಟಿ ವಾಚಿಸಿದರು.ಇದೇ ವೇಳೆ 2022-23 ಹಾಗೂ 2023-24 ರಸಾಲಿನ ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿ ಮತ್ತು ಬೆಳೆ ಸ್ಪರ್ಧೆ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಹಾಗೂ ತಾಲೂಕು ಮಟ್ಟದ ರೈತರನ್ನು ಸನ್ಮಾನಿಸಲಾಯಿತು. ಅದೇ ರೀತಿ ರೈತ ಫಲಾನುಭವಿಗಳಿಗೆ ವಿವಿಧ ಸಲಕರಣೆ ಸವಲತ್ತು ಹಾಗೂ ತಾಲೂಕಿನಲ್ಲಿರುವ 60 ಮಂದಿ ಕೃಷಿ ಸಖಿಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಬಂಟ್ವಾಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್ ಅವರು ಸ್ವಾಗತಿಸಿ, ಪ್ರಸ್ತಾವನೆಗೈದು ದ.ಕ. ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕು ಅತೀ ಹೆಚ್ಚು ಬೆಳೆ ಸಮೀಕ್ಷೆ ನಡೆಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಪಿಡಿಒ ಸುನೀಲ್ ಕಾರ್ಯಕ್ರಮ ನಿರೂಪಿಸಿದರು.
