ಬಂಟ್ವಾಳ:  ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೨೬ನೇ ವರ್ಷದ ಕಾರ್ಗಿಲ್ ಸಂಸ್ಮರಣೆಯನ್ನು ನಿವೃತ್ತ ಸೈನಿಕರೊಂದಿಗೆ ಶನಿವಾರ ಆಚರಿಸಲಾಯಿತು.೨೪ ವರ್ಷಗಳ ಕಾಲ ಸೇನೆಯಲ್ಲಿ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮಕೃಷ್ಣ.ಕೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸವಾಲನ್ನು ಎದುರಿಸಿ ಮುಂದೆ ನಡೆಯುವವನೇ ಸಿಪಾಯಿ. ದೇಶಕ್ಕಾಗಿ ಹೋರಾಡುವುದನ್ನು ಗುರಿಯನ್ನಾಗಿಸಿ, ದೇಶ ಮತ್ತು ದೇಶ ಸೇವೆಗಾಗಿ ಸಂತೋಷದಿಂದ ಹೆಜ್ಜೆಯಿಡಬೇಕು ಸೇನೆಗೆ ಸೇರುವ ಅವಕಾಶ ಸಿಕ್ಕರೆ ಅದನ್ನು ಸದುಪಯೋಗಪಡಿಸಿಕೊಳ್ಳಿ.” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, “ಈ ದಿನವನ್ನು ವಿಶೇಷವಾಗಿ ನೆನಪಿನಲ್ಲಿರಿಸಬೇಕಾದ ದಿನವಾಗಿದ್ದು,  ದೇಶಕ್ಕೋಸ್ಕರ ತನ್ನನ್ನು ತಾನು ಸಮರ್ಪಿಸಿಕೊಂಡು ದೇಶದ ರಕ್ಷಣೆ ನಮ್ಮ ಜವಾಬ್ದಾರಿ ಎಂದು ನಂಬಿದವರು ನಮ್ಮ ಸೈನಿಕರು. ನಮ್ಮ ದೇಶದ ಸೈನಿಕರ ಬದುಕು ಚೆನ್ನಾಗಿದ್ದರೆ, ನಮ್ಮ ಬದುಕು ಚೆನ್ನಾಗಿರುತ್ತದೆ ಎಂದರು.

ಮನೆಯಲ್ಲಿ ಮಕ್ಕಳನ್ನು ತಂದೆ-ತಾಯಿ ಹೇಗೆ ರಕ್ಷಣೆ ಮಾಡುತ್ತಾರೋ ಹಾಗೆಯೇ ದೇಶದಲ್ಲಿ ಸೈನಿಕರು ತ್ಯಾಗ, ಬಲಿದಾನ, ಹೋರಾಟದೊಂದಿಗೆ ನಮ್ಮ್ಮ ದೇಶವನ್ನು ರಕ್ಷಣೆ ಮಾಡುವರು.  ಅವರನ್ನು ದಿನಾ ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದ್ದು,  ದೇಶದ ರಕ್ಷಣೆಯ ಕೆಲಸವನ್ನು ಮಾಡುತ್ತೇನೆ ಎಂಬ ಧೃಡಸಂಕಲ್ಪವನ್ನು ಮಾಡಿ  ಎಂದು ಅವರು ಹೇಳಿದರು. 

ಕಾರ್ಯಕ್ರಮದ ಮುನ್ನ ನಿವೃತ್ತ ಸೈನಿಕರಿಂದ ದೀಪಪ್ರಜ್ವಲನೆ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ನಡೆಯಿತು. ನಂತರ ವಿದ್ಯಾರ್ಥಿನಿಯರು ಸಮೂಹ ಗೀತೆ ಹಾಡಿದರು. ತಬಲದಲ್ಲಿ ವಿಘ್ನೇಶ್ ಸಹಕರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ  ಶಾಲು ಹೊದಿಸಿ, ಭಾರತ ಮಾತೆಯ ಸ್ಮರಣಿಕೆ ನೀಡಿ ಗೌರವ ಸಮರ್ಪಿಸಲಾಯಿತು. ಅಧ್ಯಾಪಕರು ಆರತಿ ಬೆಳಗಿ, ತಿಲಕವನ್ನಿಟ್ಟು ಆರ್ಶೀವಾದ ಪಡೆದುಕೊಂಡರು.

 ನಿವೃತ್ತ ಸೈನಿಕ ರಾಮಕೃಷ್ಣ.ಕೆ ಅವರ ಪತ್ನಿ ಶಾಂತಿ ರಾಮಕೃಷ್ಣ.ಕೆ, ಆರ್ಮಿಯ ಟ್ರೈನಿಂಗ್ ಕೇರ್‌ನ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ರಂಗನಾಥ ರೈ ಬೆಳಿಯಾರುಗುತ್ತು, ಆಗ್ರಾ, ಸಿಕ್ಕಿಂ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಣಿಪುರ, ನಾಗಾಲ್ಯಾಂಡ್ ಮೊದಲಾದ ಸ್ಥಳಗಳಲ್ಲಿ ೧೬ ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಸೈನಿಕ ದಯಾನಂದ.ಕೆ.ನಾಯಕ್, ಆರ್ಮಿ ಫೈಟಿಂಗ್ ವೆಹಿಕಲ್‌ನಲ್ಲಿ ಸೇವೆ ಸಲ್ಲಿಸಿದ ಉದಯ್ ಕುಮಾರ್ ರಾವ್, ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಜಮ್ಮುವಿನಲ್ಲಿ ಕರ್ತವ್ಯ ನಿರತರಾಗಿದ್ದ ರಾಮಕೃಷ್ಣ ಶಾಸ್ತ್ರಿ, ಸೇನೆಯಲ್ಲಿ ಟ್ರೈನಿಂಗ್ ಇನ್ಸ್ ಪೆಕ್ಟರಾಗಿ, ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದಯಶಂಕರ ಮಾಣಿ- ಶ್ರುತಿ ದಂಪತಿಗಳು, ಮಾಜಿ ನಿವೃತ್ತ ಸೈನಿಕರಾದ ದಿನೇಶ್ ಕುಮಾರ್ ಅವರ ಪತ್ನಿ ಪದ್ಮಾವತಿ, ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿ ನಿವೃತ್ತರಾಗಿ ಪ್ರಸ್ತುತ ಪಾಂಡೇಶ್ವರದ ಯೂನಿಯನ್ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶ್ವನಾಥ ಪೂಜಾರಿ,  ದೇವಿದಾಸ್ ಶೆಟ್ಟಿ ಪಾಲ್ತಾಜೆ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್,  ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು  ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ವಿದ್ಯಾರ್ಥಿಗಳಾದ ಪ್ರಾಪ್ತಿ ಸ್ವಾಗತಿಸಿದರು, ಧನ್ಯಾ.ಆರ್ ಕಾರ್ಯಕ್ರಮ ನಿರೂಪಿಸಿದರು. ವಚನಾ ವಂದಿಸಿದರು. 

By suddi9

Leave a Reply

Your email address will not be published. Required fields are marked *