ತೆಂಕುತಿಟ್ಟಿನ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ
ಬಂಟ್ವಾಳ: ತೆಂಕುತಿಟ್ಟಿನ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಭಾನುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಲ್ಲಿ ನಿಧನ ಹೊಂದಿದ್ದಾರೆ.1965 ಡಿಸೆಂಬರ್ 17ರಂದು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯಲ್ಲಿ ಬಾಬು ಶೆಟ್ಟಿಗಾರ್ ಮತ್ತು ಗಿರಿಯಮ್ಮ ದಂಪತಿಯ ಪುತ್ರನಾಗಿ ಅವರು ಜನಿಸಿದ್ದರು.

ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರ ಯಕ್ಷಗಾನ ಆಸಕ್ತಿ ರಂಗಸ್ಥಳದವರೆಗೆ ಕರೆದೊಯ್ಯಿದಿದೆ. ರೆಂಜಾಳ ರಾಮಕೃಷ್ಣ ರಾವ್ , ಬಣ್ಣದ ಮಹಾಲಿಂಗ ಅವರ ಬಳಿ ವೇಷ, ನಾಟ್ಯ ಮತ್ತು ರಂಗದ ನಡೆಗಳ ಕುರಿತು ಕಲಿತುಕೊಂಡ ಅವರು, ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.

2 ವರ್ಷ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ ಆರಂಭಿಸಿದ ಬಳಿಕ ಕಟೀಲು 1ನೇ ಮೇಳದಲ್ಲಿ 8 ವರ್ಷಗಳ ಕಾಲ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿದರು. ಬಳಿಕ 13 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿ ಹದಿನೆಂಟು ವರ್ಷಗಳ ಕಾಲ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.
ಬಣ್ಣದ ವೇಷದ ಜೊತೆ ನಾಟಕೀಯ ರಾಕ್ಷಸ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಸಿದ್ಧಕಟ್ಟೆ ಶೆಟ್ಟಿಗಾರ್ ಅವರು ವರ್ತಮಾನ ಕಾಲದಲ್ಲಿ ಅವರ ರಾಕ್ಷಸ ಪಾತ್ರಗಳಿಗೆ ಸರಿಸಾಟಿಯೇ ಇರಲಿಲ್ಲ.ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರಿಗೆ ಸದಾಶಿವ ಶೆಟ್ಟಿಗಾರರು ವಿದ್ಯಾದಾನ ಮಾಡಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚಿನ ವರ್ಷಗಳ ಕಾಲ ವ್ಯವಸಾಯ ಮಾಡಿರುವ ಸದಾಶಿವ ಶೆಟ್ಟಿಗಾರ್ ಅವರು ಪತ್ನಿ, ಇಬ್ಬರು ಪುತ್ರರು,ಒರ್ವ ಪುತ್ರಿಯನ್ನು ಅಗಲಿದ್ದಾರೆ.ಇತ್ತೀಚೆಗೆ ಮಂಗಳೂರು ವಿವಿಯಿಂದ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದ ಅವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಹರೇಕಳ ಪಾವೂರು, ಬಿ. ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
ಇವರ ನಿಧನಕ್ಕೆ ಹಲವಾರು ಯಕ್ಷ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಅವರ ಸ್ವಗೃಹ ಸಿದ್ದಕಟ್ಟೆಯ ಮಂಚಕಲ್ಲಿನಲ್ಲಿ ಹಲವಾರು ಗಣ್ಯರು,ಯಕ್ಷಕಲಾವಿದರು,ಅವರ ಅಭಿಮಾನಿಗಳು ಮೃತರ ಅಂತಿಮ ದರ್ಶನ ಪಡೆದರು.



