ಬಂಟ್ವಾಳ:  ದ.ಕ ಜಿಲ್ಲೆಯ 428  ಪರವಾನಿಗೆದಾರರೆಲ್ಲರಿಗೂ ಮರಳು ತೆಗೆಯಲು ಅನುಮತಿ ನೀಡುವಂತೆ  ಬಿಜೆಪಿ ಮುಖಂಡ,ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಪ್ತಭಾಕರ ಪ್ರಭು ಅವರು ಮನವಿ ಮೂಲಕ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮರಳಿನ ಸಮಸ್ಯೆ ತೀವ್ರವಾಗಿ ತಲೆದೋರಿದ್ದು ,ಗೃಹ ನಿರ್ಮಾಣ , ಕಟ್ಟಡ ನಿರ್ಮಾಣಗಳು ಸೇರಿದಂತೆ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿದೆ. ಈ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಕಾರ್ಮಿಕರು ಸೇರಿ ಇನ್ನಿತರ ಅವಲಂಬಿತ ಜನರು ತಮ್ಮ ಜೀವನ ಸಾಗಿಸಲು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ .


ದ.ಕ. ಜಿಲ್ಲೆಯಲ್ಲಿ ಮರಳಿನ ಅಭಾವ ಸೃಷ್ಟಿಯಾಗಲು ಗಣಿ ಇಲಾಖೆಯ ಅಧಿಕಾರಿಗಳ ಮತ್ತು ಜಿಲ್ಲಾಡಳಿತದ ಅವೈಜ್ಞಾನಿಕ ಸೂತ್ರವೇ  ಕಾರಣವಾಗಿದೆ ಎಂಬ ಟೀಕೆ ಸಾರ್ವಜನಿಕವಾಗಿ ವಲಯದಲ್ಲಿ ಕೇಳಿಬರುತ್ತಿದ್ದು , ಜಿಲ್ಲೆಯಲ್ಲಿ ಸಿ.ಆರ್.ಝಡ್ ವಲಯದಲ್ಲಿ ಮರಳು ತೆಗೆಯಲು 2010 ರ ಹಿಂದೆ 100 ಮಂದಿಗೆ ಪರವಾನಿಗೆ ನೀಡಲಾಗಿತ್ತು. ನಂತರ 2014-15 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಮರಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಹೆಚ್ಚುವರಿಯಾಗಿ 328 ಮಂದಿಗೆ ಮರಳು ತೆಗೆಯಲು ಪರವಾನಿಗೆ ನೀಡಿದ್ದರಿಂದ 3-4 ವರ್ಷಗಳ ಕಾಲ ಮರಳಿನ ಸಮಸ್ಯೆ ತಲೆದೋರಿರಲಿಲ್ಲ ಎಂದು ಮನವಿಯಲ್ಲಿ ಪ್ರಭು ವಿವರಿಸಿದ್ದಾರೆ.


ನಂತರದಲ್ಲಿ ಬಂದಂತಹ ಜಿಲ್ಲಾಧಿಕಾರಿಗಳು ಮತ್ತು ಗಣಿ ಇಲಾಖೆ ಉಪ ನಿರ್ದೇಶಕರು 2010ರ ಮೊದಲು ಪರವಾನಿಗೆ ಪಡೆದವರಿಗೆ ಮಾತ್ರ ಎಂಬ ಷರತ್ತು ಹಾಕಿ ಅನುಮತಿ ನೀಡಿರುವುದರಿಂದ ಮರಳಿನ ಸಮಸ್ಯೆ ಉಲ್ಬಣಗೊಳ್ಳುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕವಾದ ಮರಳಿನ ಕೊರತೆ ಇಲ್ಲದಿದ್ದರೂ ಅಧಿಕಾರಿಗಳ ಮಟ್ಟದಲ್ಲಿ ಆಗುತ್ತೊರುವ ಎಡವಟ್ಟಿನಿಂದಾಗಿ ಅಕ್ರಮ ಸಾಗಾಟ ಮತ್ತು ಮರಳಿನ ಅಭಾವಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.


ಮರಳು ತೆಗೆಯುವ ವಿಚಾರದಲ್ಲಿ ಸರಕಾರದ ಮಟ್ಟದಲ್ಲಿ ಎದುರಾಗುವ ಎಲ್ಲಾ ಅಡೆ ತಡೆ ಮತ್ತು ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿಕೊಂಡು ಜಿಲ್ಲೆಯಲ್ಲಿನ ಸಿ.ಆರ್.ಝಡ್ ನಲ್ಲಿ ಮರಳು ತೆಗೆಯಲು ಜಿಲ್ಲೆಯಲ್ಲಿ ಈಗಾಗಲೇ ಪರವಾನಿಗೆ ಪಡೆದಿರುವ ಎಲ್ಲಾ 428 ಮಂದಿ ಪರವಾನಿಗೆದಾರರೆಲ್ಲರಿಗೂ ಗಣಿ ಇಲಾಖೆಯಿಂದ ಅನುಮತಿ ನೀಡುಂತೆ ಪ್ರಭು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *