ಬಂಟ್ವಾಳ : ಜೀವನದಲ್ಲಿ ತಾಯಿಯ ಪಾತ್ರ ಪ್ರಮುಖವಾಗಿದೆ. ಮಗುವಿನ ನೋವು,ನಲಿವಿನಲ್ಲಿ ಮಾತ್ರವಲ್ಲ ಸಂಸ್ಕಾರಯುತ ಶಿಕ್ಷಣ ಹೊಂದುವಲ್ಲೂ ತಾಯಿ ಮಗುವಿನ ಪ್ರತಿ ಹಂತದಲ್ಲೂ ಜೊತೆಯಾಗಿರಬೇಕು, ಸಂಸ್ಕಾರಯುತ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುವಲ್ಲಿ ತಾಯಿಯೇ ಮೊದಲ ಗುರು ಆಗಿರುತ್ತಾಳೆ. ಸರಕಾರಿ ಶಾಲೆಗಳು ಸಮಾಜದ ಕನ್ನಡಿಯಾಗಿವೆ ಎಂದು ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ,ಬಿ.ಸಿ.ರೋಡಿನ ನ್ಯಾಯವಾದಿ ಶೈಲಜ ರಾಜೇಶ್ ಹೇಳಿದರು.

ಗುರುವಾರ ಬಂಟ್ವಾಳ ತಾಲೂಕಿನ ವೀರಕಂಭಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕ – ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ತಂತ್ರಜ್ಞಾನದ ಬಳಕೆಗೆ ಜೀವನದಲ್ಲಿ ಒಂದು ಚೌಕಟ್ಟನ್ನು ಹೊಂದಿರಬೇಕು, ಮನುಷ್ಯ ಎಷ್ಟೇ ಸಿರಿತನವನ್ನು ಹೊಂದಿದ್ದರೂ ಸಂಸ್ಕಾರವನ್ನು ಬಿಡಬಾರದು, ಯುವ ಜನಾಂಗ ಇಂದು ಮೊಬೈಲ್ ಗಳ ದಾಸರಾಗುತ್ತಿರುವುದು ಕಳವಳಕಾರಿ ವಿಚಾರವಾಗಿದ್ದು,ಈ ನಿಟ್ಟಿನಲ್ಲಿ ಎಚ್ಚರವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಸಿಂಗೇರಿ ವಹಿಸಿ ಮಾತನಾಡಿ, ಸಂಸ್ಕಾರಯುತ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಮೂಡಿಬರಲು ಸಾಧ್ಯವಾಗಿದೆ ಎಂದು ಹೇಳಿದರು.
ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯದ ಧರ್ಮದರ್ಶಿ ಮನೋಜ್ ಕುಮಾರ್, ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೋಳಿಮಾರ್ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್, ಶಾಲಾ ನಾಯಕಿ ಲಿಖಿತ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು , ಮಕ್ಕಳ ಪೋಷಕರು, ಶಾಲಾ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿದರು, ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಪಿ.ಜಿ ಕಾರ್ಯಕ್ರಮ ನಿರೂಪಿಸಿದರು
