ಬಂಟ್ವಾಳ: ಅಡಕೆ, ಕರಿಮೆಣಸು ಬೆಳೆಗಳಿಗೆ ಹವಾ ಮಾನ ಆಧರಿತ ಬೆಳೆ ವಿಮೆ ಪ್ರೀಮಿಯಂ ಪಾವತಿಸಲು ಆರಂಭಗೊಂಡಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದ್ದಾರೆ.ಕರಾವಳಿ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯ ದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರ ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ರಾಜ್ಯ ಸರಕಾರ ಸಹಭಾಗಿತ್ವದ ಮಹತ್ವಾಕಾಂಕ್ಷೆ ಯೋಜನೆಯಾದ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯನ್ನು 2025- 26 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ತೋಟ ಗಾರಿಕೆ ಇಲಾಖೆ ಜಾರಿಗೊಳಿಸಿದೆ.
ಅಡಕೆ, ಕರಿಮೆಣಸು, ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆ ವಿಮೆ ಮಾಡಲು ಪ್ರೀಮಿಯಂ ಪಾವತಿಸಲು ಪ್ರಾರಂಭವಾಗಿದೆ. ಬೆಳೆ ಸಾಲ ಪಡೆದಿರುವ ರೈತರು ತಾವು ಬೆಳೆ ಸಾಲ ಪಡೆದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಂಪರ್ಕ ಮಾಡಿ ನೋಂದಣಿ ಮಾಡಿಸಿ ಪ್ರೀಮಿಯಂ ಮೊತ್ತ ಪಾವತಿಸಬಹುದಾಗಿದೆ. ಬೆಳೆ ಸಾಲ ಹೊಂದಿಲ್ಲದ ರೈತರು ಸಹ ಈ ಯೋಜನೆಯಡಿ ಪ್ರಿಮಿಯಂ ಮೊತ್ತ ಪಾವತಿಸಿ ಯೋಜನೆಯ ಪ್ರಯೋ ಜನ ಪಡೆಯಬಹುದಾಗಿದೆ. ಅಡಕೆ ಬೆಳೆಗೆ ಸಂಬಂಧಿಸಿದಂತೆ ಎಕರೆ ಒಂದಕ್ಕೆ 2,590 ರೂ. ಮತ್ತು ಕರಿಮೆಣಸು ಎಕರೆ ಒಂದಕ್ಕೆ 951 ರೂ. ವಿಮೆ ಕಂತು ಪಾವತಿಸಬೇಕಾಗುತ್ತದೆ.
ಈ ಯೋಜನೆಯ ನೋಂದಣಿಗೆ ಜು.31 ಕೊನೆಯ ದಿನವಾಗಿದ್ದು, ಬೆಳೆ ಸಾಲ ಪಡೆದಿರುವ ಎಲ್ಲ ರೈತರು ಜಮೀನಿನ ಆರ್‌ಟಿಸಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ ಹಾಗೂ ನಾಮಿನಿಯ ಆಧಾರ್ ಜತೆಗೆ ನಿಗದಿತ ಅವಧಿಯೊಳಗೆ ತಮ್ಮ ಕಾಠ್ಯ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗಳನ್ನು ಸಂಪರ್ಕಿಸಿ ಬೆಳೆ ವಿಮೆ ಯೋಜನೆ ಪ್ರಯೋಜನ ಪಡೆಯಬೇಕೆಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ವಿನಂತಿಸಿದ್ದಾರೆ.
