ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ, ವಿದ್ಯಾಗಿರಿ, ಬಂಟ್ವಾಳ ಇದರ ವತಿಯಿಂದ ಸಂಘದ ಸದಸ್ಯ ರಾಘವೇಂದ್ರ ಕೂಡಿಗೆ ಶೆಣೈ ಅವರು ತನ್ನ ಮಾತಶ್ರೀ ಸವಿತಾ ಪಾಂಡುರಂಗ ಶೆಣೈ ಅವರ ಸ್ಮರಣಾರ್ಥ ಶ್ರೀ ವೆಂಕಟರಮಣ ಸ್ವಾಮೀ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆ-೨೦೨೫ಗೆ ಚಾಲನೆ ನೀಡಲಾಯಿತು.

ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳು, ವಿದ್ಯಾಗಿರಿ ಬಂಟ್ವಾಳ ಇದರ ಸಂಚಾಲಕಿ ಕೆ. ರೇಖಾ ಶೆಣೈ ಅವರು ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ, ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆ-೨೦೨೫ರ ಫಲಾನುಭವಿ ವಿದ್ಯಾರ್ಥಿಗಳಿಗೆ ಕಾರ್ಡ್ ವಿತರಿಸುವ ಮೂಲಕ ಚಾಲನೆ ನೀಡಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಿವಣ್ಣ ಪ್ರಭು ಕೆ ಅವರು ಅತಿಥಿಸ್ಥಾನದಿಂದ ಮಾತನಾಡಿ, ಸಮಾಜದ ವಿವಿಧ ನೆಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಣವನ್ನರಸಿಕೊಂಡು ಶಿಕ್ಷಣ ಸಂಸ್ಥೆಗಳಿಗೆ ಬರುತ್ತಾರೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವುದು ಶಿಕ್ಷಣ ಕೇಂದ್ರಗಳ ಜವಾಬ್ದಾರಿಯಾಗಿದೆ.ಕಲಿಕೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗೆ ತಾನು ಕಲಿಯುವ ಪರಿಸರವೂ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಕಾಲೇಜು ಆಡಳಿತಮಂಡಳಿಯು ಜ್ಞಾನದ ಹಸಿವನ್ನು ನೀಗಿಸುವ ಜೊತೆಗೆ ವಿದ್ಯಾರ್ಥಿಗಳ ಹೊಟ್ಟೆಯ ಹಸಿವನ್ನು ನೀಗಿಸುವ ಕೆಲಸ ಮಾಡಿರುವುದು ಅಭಿನಂದನೀಯ ಎಂದು ಹೇಳಿದರು.

ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಶಿಧರ್ ಎಸ್. ಫಲಾನುಭವಿ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ. ಸ್ವಾಗತಿಸಿದರು. ಉಪಪ್ರಾಂಶುಪಾಲ ಲೆಪ್ಟಿನೆಂಟ್ ಪ್ರದೀಪ್ ಪೂಜಾರಿ ವಂದಿಸಿದರು, ಸಂಸ್ಕೃತ ಉಪನ್ಯಾಸಕ ಗಣೇಶ್ ಕಾರ‍್ಯಕ್ರಮ ನಿರೂಪಿಸಿದರು.
