ಬಂಟ್ವಾಳ: ರಾಜ್ಯದಲ್ಲಿ ಸೇಂದಿ, ಸಾರಾಯಿ ಉತ್ಪಾದನೆ, ಮಾರಾಟ ನಿಷೇಧದ ಬಳಿಕ ಈಡಿಗ, ಬಿಲ್ಲವ ಸಹಿತ 26 ಉಪಜಾತಿಗಳು ಸಂಕಷ್ಟದಲ್ಲಿದ್ದು, ಇದೇ ಉದ್ಯಮವನ್ನು ನೆಚ್ಚಿಕೊಂಡಿರುವ ಸಮುದಾಯಗಳಿಗೆ ಆಂಧ್ರಪ್ರದೇಶ, ತೆಲಂಗಾಣ ಮಾದರಿಯಂತೆ ರಿಯಾಯತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸಿಎಂಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಹರಿಪ್ರಸಾದ್ ನೇತೃತ್ವದ ನಿಯೋಗವು
ಮದ್ಯದಂಗಡಿಗಳ ಪರವಾನಿಗೆ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು,
ಸೇಂದಿ ಮತ್ತು ಸಾರಾಯಿ ನಿಷೇಧದ ಸಂದರ್ಭಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ನಮ್ಮ ಈಡಿಗ ಹಾಗೂ ಅದರ ಉಪ ಜಾತಿಗಳ ಜನರ ಪುನರ್ವಸತಿ ವಿಷಯದಲ್ಲಿ ಸರ್ಕಾರ ನೀಡಿದ್ದ ಯಾವುದೇ ಭರವಸೆಗಳೂ ಈಡೇರಿಲ್ಲ. ಇದರಿಂದಾಗಿ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬದುಕನ್ನೇ ಕಳೆದುಕೊಂಡಿದ್ದಾರೆ ಎಂದಿದ್ದಾರೆ.
ಎಸ್. ಎಮ್. ಕೃಷ್ಣ ಅವರು ಸಿ.ಎಂ.ಆಗಿದ್ದಾಗ ಮದ್ಯ ಮಾರಾಟದ ಮೇಲಿನ ಲಾಭಾಂಶದಲ್ಲಿ ಶೇ. 20 ರಷ್ಟು ಮದ್ಯದಂಗಡಿಗಳ ಮಾಲೀಕರಿಗೆ ನೀಡಲಾಗುತ್ತಿತ್ತು. ಹಿಂದಿನ ಸರಕಾರವು ಅದನ್ನು ಶೇ. 10ಕ್ಕೆ ಇಳಿಸಿರುವುದರಿಂದ ಮದ್ಯ ಮಾರಾಟಗಾರರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.
ಸೇಂದಿ, ಸಾರಾಯಿ ಮಾರಾಟ ನಿಷೇಧದಿಂದ ಉದ್ಯೋಗ ಕಳೆದುಕೊಂಡ ಈಡಿಗ, ಬಿಲ್ಲವ ಮತ್ತು ಉಪ ಜಾತಿಗಳ ಜನರಿಗೆ ಇದರಿಂದ ಇನ್ನಷ್ಟು ತೊಂದರೆ ಆಗಿದೆ. ಈಗ ರಾಜ್ಯ ಸರ್ಕಾರವು ಮದ್ಯದಂಗಡಿಗಳ ಪರವಾನಗಿ ಶುಲ್ಕವನ್ನು ದುಪ್ಪಟ್ಟು ಮಾಡಿ ಆದೇಶ ಹೊರಡಿಸಿದೆ. ಇದರಿಂದ ಸಮುದಾದಯ ಜನರು ಮದ್ಯ ವ್ಯಾಪಾರದಿಂದಲೂ ಹೊರ ಹೋಗುವಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ. ಪ್ರವಾಸೋದ್ಯಮ ಉತ್ತೇಜನದ ಹೆಸರಿನಲ್ಲಿ ನೀಡುತ್ತಿರುವ ಹೊಸ ಪರವಾನಗಿಗಳಿಂದಲೂ ಸಮುದಾಯದ ಮದ್ಯ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದೆ ಎಂದು ವಿ.ಪ.ಸದಸ್ಯ ಹರಿಪ್ರಸಾದ್ ಸಿ.ಎಂ.ಅವರ ಗಮನಕ್ಕೆ ತಂದಿದ್ದಾರೆ.
