ಜೂ.8 ರಂದು ಬಂಟ್ವಾಳ ವ್ಯ. ಸೇ. ಸ.ಸಂಘದ ನೂತನ ಕಟ್ಟಡ “ಅಕ್ಷಯ ಸೌಧ” ಹಾಗೂ ಹೊಸ ಶಾಖೆಯ ಲೋಕಾರ್ಪಣೆ
ಬಂಟ್ವಾಳ :ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಬಂಟ್ವಾಳ ಇದರ ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದ ಬಳಿ ಸುಮಾರು 2.50 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಹವಾನಿಯಂತ್ರಿತ ನೂತನ ಕಟ್ಟಡ”ಅಕ್ಷಯ ಸೌಧ” ಹಾಗೂ ಹೊಸ ಶಾಖೆಯ ಲೋಕಾರ್ಪಣೆಯು ಜೂ.8 ರಂದು ಬೆ.10.30 ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎಂ.ಕರುಣೇಂದ್ರ ಪೂಜಾರಿ ತಿಳಿಸಿದ್ದಾರೆ.

ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ನೂತನ ಕಟ್ಟಡದ ಉದ್ಘಾಟನೆಯನ್ನು ಸಹಕಾರ ರತ್ನ ,ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಲಿದ್ದು,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಶಾಖೆಯ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
ಈ ನೂತನ ಕಟ್ಟಡ ಸಂಘದ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಜಿ.ಆನಂದ್ ಅವರ ಕನಸಿನ ಯೋಜನೆಯಾಗಿದ್ದು,ಅವರ ಹೆಸರಿನಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದ್ದು,ಇದರ ಉದ್ಘಾಟನೆಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ,ಗಣಕೀಕರಣವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಸೇಫ್ ಲಾಕರನ್ನು ಮಾಜಿ ಸಚಿವ ರಮಾನಾಥ ರೈ,ಸಭಾಭವನವನ್ನು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಉದ್ಘಾಟಿಸುವರು ಎಂದು ಹೇಳಿದ ಅವರು ವಿ.ಪ.ಸದಸ್ಯರಾದ ಕಿಶೋರ್ ಕುಮಾರ್,ಪ್ರತಾಪಸಿಂಹ ನಾಯ್ಕ್,ಪುರಸಭಾಧ್ಯಕ್ಷ ವಾಸುಪೂಜಾರಿ,ಬೂಡಾ ಅಧ್ಯಕ್ಷ ಬೇಬಿಕುಂದರ್,ಡಿಸಿಸಿ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್,ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ,ಬಂಟ್ವಾಳ ಭೂಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿಸೋಜ,ಪುರಸಭಾ ಸದಸ್ಯರಾದ ಗೋವಿಂದಪ್ರಭು,ಜಯಂತಿ ವಿ.ಬಂಗೇರ,ಸಹಕಾರ ಸಂಘಗಳ ಉಪನಿಬಂಧಕರು ಹೆಚ್.ಎನ್.ರಮೇಶ್,ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಮ್ಮ ಸಂಘವು ಬಂಟ್ವಾಳ ತಾಲೂಕಿನ ಬಂಟ್ವಾಳ ಕಸ್ಟಾ, ಬಿ.ಮೂಡ, ಪಂಜಿಕಲ್ಲು, ನಾವೂರು ಹಾಗೂ ದೇವಸ್ಯಪಡೂರು ಈ 5 ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊದಿರುತ್ತದೆ. ಪ್ರಕೃತ ಸಂಘವು ಪ್ರಗತಿಯತ್ತ ಸಾಗುತ್ತಿದೆ ಎಂದರು.
ಸಂಘವು 2025 ರ ಮಾ.ಅಂತ್ಯಕ್ಕೆ 351.74 ಲ.ರೂ.ಪಾಲು ಬಂಡವಾಳ, 3925.25 ಲ.ಠೇವಣಿ, 158.72 ಲ.ಕ್ಷೇಮನಿಧಿ ಹಾಗೂ 199.77 ಲಕ್ಷ ಇತರ ನಿಧಿಗಳನ್ನು ಹೊಂದಿರುತ್ತದೆ.ಠೇವಣಾತಿ ಮತ್ತು ಷೇರುಗಳಲ್ಲಿ 1756.99 ಲ.ರೂ. ಹೂಡಿಕೆ ಮಾಡಿರುತ್ತದೆ. ಸದಸ್ಯರ ಹೊರಬಾಕಿ ಸಾಲ 3589.04 ಆಗಿದ್ದು, ವರ್ಷಾಂತ್ಯಕ್ಕೆ ರೂ.72.34 ಲಕ್ಷ ತಾತ್ಕಾಲಿಕ ಲಾಭ ಬಂದಿರುತ್ತದೆ ಎಂದು ಅಧ್ಯಕ್ಷ ಕರುಣೇಂದ್ರ ಪೂಜಾರಿ ವಿವರಿಸಿದರು.
ಸಂಘವು ಕೃಷಿಕ ಸದಸ್ಯರಿಗೆ ಶೇ.0 ಬಡ್ಡಿದರದಲ್ಲಿ ಮಂಗಳಾ ಕಿಸಾನ್ ಕ್ರೆಡಿಟ್ ಸಾಲ, ಶೇ.3 ಬಡ್ಡಿದರದಲ್ಲಿ ಕೃಷಿ ಮಧ್ಯಮಾವಧಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸುಲಭ ಬಡ್ಡಿದರದಲ್ಲಿ ಆಭರಣ ಈಡಿನ ಸಾಲ, ಗೃಹ ಉಪಯೋಗಿ ಉಪಕರಣ ಖರೀದಿ ಸಾಲ, ವ್ಯಾಪಾರ ಸಾಲ, ಸ್ವ ಸಹಾಯ ಗುಂಪು ಸಾಲ, ಠೇವಣಿ ಆಧಾರಿತ ಸಾಲ, ಗೃಹ ನಿರ್ಮಾಣ ಸಾಲ ನೀಡುತ್ತಿದೆ. ಸಂಘದಲ್ಲಿ 263 ನವೋದಯ ಸ್ವ ಸಹಾಯ ಗುಂಪುಗಳಿದ್ದು 2024-25ನೇ ಸಾಲಿನಲ್ಲಿ 27 ಗುಂಪುಗಳಿಗೆ 47.85 ಲಕ್ಷ ಸಾಲವನ್ನು ನೀಡಿದ್ದು, 57.18 ಲಕ್ಷ ಸಾಲ ಮರುಪಾವತಿಸಲ್ಪಟ್ಟು ವರ್ಷಾಂತ್ಯಕ್ಕೆ 58 ಸ್ವ ಸಹಾಯ ಗುಂಪುಗಳ 63.34 ಲ.ರೂ. ಸಾಲ ಹೊರಬಾಕಿ ಇರುತ್ತದೆ ಎಂದರು.
ಸಂಘದ ಸದಸ್ಯರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ. ಅಂತಿಮ ಪದವಿ ವ್ಯಾಸಾಂಗ ಮಾಡುತ್ತಿರುವ ಶಿಕ್ಷಣಾರ್ಥಿಗಳು ಇಂಟರ್ನ್ ಶಿಪ್ ಕೇಳಿ ಬಂದಲ್ಲಿ ಅವರಿಗೆ ಉಚಿತವಾಗಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ ಎಂದರು.
ಬಂಟ್ವಾಳ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಪ್ರಧಾನ ಕಛೇರಿಯ ಆಡಳಿತ ವಿಭಾಗವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು,ಬಂಟ್ವಾಳ ಕಸ್ಟಾ ಗ್ರಾಮದ ಸದಸ್ಯರ ಅನುಕೂಲಕ್ಕಾಗಿ
ಈ ಶಾಖೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಸದಸ್ಯರಿಗೆ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯ, ಎನ್ ಇಎಫ್ ಟಿ/ ಆರ್ ಟಿ ಜಿಎಸ್ ಸೌಲಭ್ಯ, ಪಹಣಿ ಪತ್ರಿಕೆ ಪ್ರತಿ ಪಡೆದುಕೊಳ್ಳುವ ಸೌಲಭ್ಯ ಎಲ್ಲಾ ಶಾಖೆಗಳಲ್ಲಿದೆ ಎಂದರು.
ಸಂಘದ ಉಪಾಧ್ಯಕ್ಷ ಅದಿರಾಜ್ ಕೆ. ಜೈನ್, ನಿರ್ದೇಶಕರಾದ ಬಿ.ಸದಾಶಿವ ಶೆಣೈ,ಗಣೇಶ್ ದಾಸ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.



