ಕಲ್ಲಡ್ಕ ಶ್ರೀರಾಮ ಡಿಗ್ರಿ ಕಾಲೇಜಿನಲ್ಲಿ ಬೀಳ್ಕೊಡುಗೆ- ದೀಪಪ್ರದಾನ
ಬಂಟ್ವಾಳ; ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ೨೦೨೨-೨೦೨೫ರ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ದೀಪಪ್ರದಾನ- ೨೦೨೫ ಕಾರ್ಯಕ್ರಮವು ಮಂಗಳವಾರ ಕಾಲೇಜಿನ ಆಜಾದ್ ಭವನದಲ್ಲಿ ನಡೆಯಿತು. ಸನಾತನ ಸಂಸ್ಕೃತಿಯ ಆಧಾರದಲ್ಲಿ ನಡೆಯುವ ಈ ಭಾವಪೂರ್ಣ ಸಮಾರಂಭವನ್ನು ದೀಪ ಪ್ರಜ್ವಲನ ಹಾಗೂ ಸರಸ್ವತಿ ವಂದನೆಯ ಮೂಲಕ ಚಾಲನೆಗೊಂಡು ನಂತರ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಸಿಹಿ ನೀಡಲಾಯಿತು.

ವಿದ್ಯಾರ್ಥಿಗಳು ಧನುರ್ಬಾಣದ ಚಿತ್ರಕ್ಕೆ ಹಣತೆ ಹಚ್ಚುವ ಮೂಲಕ ಧರ್ಮ ರಕ್ಷಣೆಯ ಸಂಕಲ್ಪ ತೊಟ್ಟರು. ಈ ಸಂದರ್ಭದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು ಮುಂದಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೆಳಗುವ ದೀಪ ಹಸ್ತಾಂತರಿಸುವ ಮೂಲಕ ತಮ್ಮ ಜವಾಬ್ದಾರಿಗಳನ್ನು ವರ್ಗಾಯಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ವಹಿಸಿ, ಇಲ್ಲಿ ಕಲಿತ ಸಂಸ್ಕಾರ, ಸಂಸ್ಕೃತಿಗಳನ್ನು ಮುಂದುವರಿಸಿ, ಮುಂದೆ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಸಮಾಜಮುಖಿ ಚಿಂತನೆಯೊಂದಿಗೆ ದೇಶವನ್ನು ಉನ್ನತಮಟ್ಟಕ್ಕೇರಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಅಭ್ಯಾಗತರಾಗಿ ಭಾಗವಹಿಸಿದ್ದ ಆಗಮಿಸಿದ ಮೈಸೂರು ಎಂಜಿನಿಯರಿಂಗ್ ಕಾಲೇಜಿನ ಚೆಯರ್ಮನ್ ಅರುಣ್ ಕುಮಾರ್,ಗಳೂರು ವಿವಿ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಡಾ. ಗಣೇಶ್ ಸಂಜೀವ್ ,ಸ್ವಸ್ತಿಕ್ ನ್ಯಾಷನಲ್ ಸ್ಕೂಲ್ ಮಂಗಳೂರಿನ ಸಂಸ್ಥಾಪಕರಾದ ಡಾ. ರಾಘವೇಂದ್ರ ಹೊಳ್ಳ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್, ವೆಂಕಟೇಶ್ ಎಚ್, ಡಾ. ಸಚ್ಚಿದಾನಂದ ಮೂರ್ತಿ, ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾಸಂಸ್ಥೆಗೆ ಕೊಡುಗೆಗಳನ್ನು ನೀಡಿದರು.ಬಿಸಿಎ ವಿದ್ಯಾರ್ಥಿ ಯತೀಶ್ ತಬಲವನ್ನು ಕಾಲೇಜಿಗೆ ನೀಡಿದರು. ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿ ಲಿಖಿತ್ ವೈಯಕ್ತಿಕ ಗೀತೆ ಹಾಡಿದನು. ವಿದ್ಯಾರ್ಥಿಗಳಾದ ಕು. ಅಶ್ವಿನಿ ವಂದಿಸಿ, ಕು. ಧನುಶ್ರ ಕಾರ್ಯಕ್ರಮ ನಿರೂಪಿಸಿದರು.



