ಬಂಟ್ವಾಳ: ರಾಜ್ಯ ವಿಧಾನಪರಿಷತ್ತಿನ ವಿಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಅವರನ್ನು ದಿಗ್ಬಂಧನಗೊಳಿಸಿರುವುದನ್ನು ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪ್ಪಾಡಿಗುತ್ತು
ಖಂಡಿಸಿದ್ದಾರೆ.

ಶೋಷಿತ ಸಮುದಾಯಗಳ ಮುಖಂಡರಾಗಿರುವ ಛಲವಾದಿ ಟಿ. ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಗೂಂಡಾ ಬೆಂಬಲಿಗರು ದಿಗ್ಬಂಧನದಲ್ಲಿರಿಸಿರುವ ಘಟನೆ ರಾಜ್ಯ ಗೃಹ ಇಲಾಖೆಯ ವೈಫಲ್ಯ ಕೂಡ ಎದ್ದುಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೂಂಡಾಗಳ ಪಾಳೆಗಾರಿಕೆ ಸಂಸ್ಕೃತಿಯ ಜೀವಂತಿಕೆಯನ್ನು ಪ್ರತಿಬಿಂಬಿಸಿದೆ.ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದ್ದು, ನಿತ್ಯ ಗೊಂದಲದ ಮತ್ತು ಜನರಿಗೆ ರಕ್ಷಣೆ ಇಲ್ಲದೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆ ಗೂಂಡಾಗಳಿಗೆ ರಕ್ಷಣೆ ನೀಡುವುದು ಸರಿಯಲ್ಲ,
ವಿಪಕ್ಷದ ನಾಯಕರೊಬ್ಬರಿಗೆ ರಕ್ಷಣೆ ನೀಡಲಾಗದ ಪೊಲೀಸ್ ಇಲಾಖೆಗೆ ಸಾಧ್ಯವಾಗದಿದ್ದರೆ ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿರುವ ಅವರು, ಛಲವಾದಿ ಅವರಿಗಾದ ಈ ಘಟನೆ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ ಮತ್ತು ಸಂವಿಧಾನಕ್ಕು ಗೌರವ ಇಲ್ಲ ಎನ್ನುವುದು ಸಾಭೀತಾಗಿದೆ.
ಶೋಷಿತ ಸಮಾಜದ ಜನರ ಬಗ್ಗೆ ಮಾತನಾಡುವ ಕಾಂಗ್ರೆಸ್ ಗೆ ಒಬ್ಬ ಶೋಷಿತ ಸಮುದಾಯಗಳ ನಾಯಕನಿಗೆ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ ಎಂದಾದರೆ ಇವರಿಗೆ ಯಾವದೇ ನೈತಿಕತೆ ಉಳಿದಿಲ್ಲ ಎಂದು ತಿಳಿಸಿರುವ ಅವರು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸೂಕ್ತ ಭದ್ರತೆ ಒದಗಿಸಿ ದಿಗ್ಬಂಧನ ಹಾಕಿರುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
