ಕಲ್ಲಡ್ಕ ಶ್ರೀರಾಮ ಡಿಗ್ರಿ ಕಾಲೇಜಿನಲ್ಲಿ ಅಂತರ್‌ಕಾಲೇಜು ಮಟ್ಟದ ಮ್ಯಾಟ್ ಕಬಡ್ಡಿ ಲೀಗ್ ಪಂದ್ಯಾಟ
ಬಂಟ್ವಾಳ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರತಾಪ ಕ್ರೀಡಾಸಂಘದ ವತಿಯಿಂದ ಅಂತರ್ ಕಾಲೇಜು ಮಟ್ಟದ ಕಬಡ್ಡಿ ಲೀಗ್ (ಮ್ಯಾಟ್ ಕಬಡ್ಡಿ) ಪಂದ್ಯಾಟವು ಮಂಗಳವಾರ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು.

ಉದ್ಯಮಿ, ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಟ್ರೋಫಿಗಳ ಮೇಲಿನ ಪರದೆ ಸರಿಸುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಅಸ್ಪೃಶ್ಯತೆ ನಿವಾರಣೆಯ ಸಂದೇಶದೊಂದಿಗೆ ಭಾರತೀಯ ಆಟಗಳಲ್ಲೊಂದಾದ ಕಬಡ್ಡಿ ಲೀಗ್ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದರು. ಮಂಗಳೂರಿನ ಯುವ
ರಾಷ್ಟ್ರೀಯ ಕಬಡ್ಡಿ ಆಟಗಾರ, ಯೋಧ ಧನರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭ ಯೋಧ ಧನರಾಜ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಕಾಲೇಜು ಪ್ರಾಚಾರ್ಯ ಕೃಷ್ಣ ಪ್ರಸಾದ್ ಕಾಯರ್‌ಕಟ್ಟೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಪುಗಾರರಾದ ಮನೋಹರ್ ಕೆದಿಲ, ಅರವಿಂದ, ದೀಪಕ್ ಪೆರಾಜೆ ಹಾಗೂ ಉಪ ಪ್ರಾಂಶುಪಾಲ ಯತಿರಾಜ್ ಪೆರಾಜೆ, ಕ್ರೀಡಾ ಸಂಘದ ನಿರ್ದೇಶಕ ಪ್ರಶಾಂತ್ ಸೋಮಯಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ
ಶಶಾಂಕ್ ವಂದಿಸಿದರು, ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.