ಮಂಗಳೂರು: ಕರಾವಳಿಗೆ ತಟ್ಟದ ಕರ್ನಾಟಕ ಬಂದ್ ಬಿಸಿ

ಮಂಗಳೂರು:ರಾಜ್ಯದಲ್ಲಿ ಇಂದು ಬಂದ್ ಮಾಡಲಾಗಿದೆ. ಆದರೆ ಕೆಲವೊಂದು ಕಡೆ ಬಂದ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಕರಾವಳಿಗೆ ಈ ಬಂದ್ ಬಿಸಿ ತಟ್ಟಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಜನ ಜೀವನ ನಡೆಯುತ್ತಿದೆ. ಮಂಗಳೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಯಥಾಸ್ಥಿತಿಯಾಗಿದೆ. ಎಂದಿನಂತೆ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ಸುಗಳು ಓಡಾಡುತ್ತಿದೆ. ಬಸ್ಸುಗಳ ಜೊತೆಗೆ ಆಟೋ ರಿಕ್ಷಾ ಸಂಚಾರವೂ ಯಥಾಸ್ಥಿತಿ ಸಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳಿಂದ ಬಂದ್ ಗೆ ಬೆಂಬಲ ಸಿಕ್ಕಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಭಾಗದಲ್ಲಿ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್ಸುಗಳು ಯಥಾಸ್ಥಿತಿ ಓಡಾಟ ನಡೆಸುತ್ತಿದೆ. ಹೊಟೇಲ್ ಸೇರಿದಂತೆ ಖಾಸಗಿ ಉದ್ಯಮಗಳೂ ಯಥಾಸ್ಥಿತಿ ವ್ಯಾಪಾರ ವಹಿವಾಟು ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಬಂದ್ ಗೆ ಬೆಂಬಲಕ್ಕೆ ಕನ್ನಡ ಪರ ಸಂಘಟನೆಗಳು ಯಾವುದೇ ರೀತಿಯ ಮನವಿಯನ್ನು ಮಾಡಿಕೊಂಡಿಲ್ಲ.