ಸುದ್ದಿ9 ವಿಶೇಷ: ‘ಪುರಲ್ದಪ್ಪೆನ ಚೆಂಡು’: ಪೊಳಲಿ ಚೆಂಡು ತಯಾರಿಸುವುದು ಎಲ್ಲಿ, ಯಾರು? ಪುರಲ್ದ ಚೆಂಡಿನ ವೈಶಿಷ್ಟ್ಯ ಏನು ಗೊತ್ತಾ?

ತುಳುನಾಡಿನ ಇತಿಹಾಸ ಪ್ರಸಿದ್ಧ ರಾಜರಾಜೇಶ್ವರಿ ಸನ್ನಿಧಿ ಪೊಳಲಿಯ ಜಾತ್ರೆಯೆಂದರೆ ಅದು ವಿಶೇಷ ಮಾತ್ರವಲ್ಲ ವಿಶಿಷ್ಟವೂ ಕೂಡಾ. ಅತ್ಯಂತ ಸುದೀರ್ಘ ಅಂದರೆ ಒಂದು ತಿಂಗಳ ಕಾಲ ನಡೆಯುವ ಈ ಜಾತ್ರಾಮಹೋತ್ಸವದಲ್ಲಿ ಚೆಂಡು ಉತ್ಸವ ಪ್ರಮುಖ ಆಕರ್ಷಣೆ. ಹೌದು ಒಂದು ತಿಂಗಳುಗಳ ಕಾಲ ನಡೆಯುವ ಇಲ್ಲಿನ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ ಕೊನೆಯ ಐದು ದಿನಗಳ ಕಾಲ ನಡೆಯುವ ‘ಪೊಳಲಿ ಚೆಂಡು’ ಉತ್ಸವ ಆಗಿದೆ. ಇದು ಸ್ಥಳೀಯ ಭಾಷೆಯಲ್ಲಿ ‘ಪುರಲ್ದಪ್ಪೆನ ಚೆಂಡು’ ಎಂದೇ ಪ್ರಖ್ಯಾತಿ ಪಡೆದಿದೆ. ಪುರಾಣಗಳ ಪ್ರಕಾರ ದೇವಿಯು ಚಂಡಿಕೆಯಾಗಿ ಲೋಕ ಕಂಟಕರಾದ ಚಂಡ-ಮುಂಡರ ರುಂಡವನ್ನು ಕಡಿದು ಚೆಂಡಾಡುತ್ತಾಳೆ. ಇದರ ಪ್ರತೀಕವಾಗಿ ಪೊಳಲಿಯ ಜಾತ್ರಾ ಮಹೋತ್ಸವದ ಸಂದರ್ಭ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಚೆಂಡಾಡುವ ಸಂಪ್ರದಾಯವಿದೆ.
ಅಂದ ಹಾಗೆ ಪುರಲ್ದ ಚೆಂಡು ತಯಾರಾಗೋದು ಮೂಡಬಿದರೆಯಲ್ಲಿ. ಈ ಚೆಂಡನ್ನು ಮೂಡುಬಿದಿರೆಯ ಸಮಗಾರ ಮನೆತನದವರು ತಯಾರಿಸುತ್ತಾರೆ. ಪೊಳಲಿ ಜಾತ್ರೆಯ ಪ್ರಮುಖ ಕೇಂದ್ರಬಿಂದು ಎನ್ನುವಂತೆ ಇರುವ ಪೊಳಲಿ ಚೆಂಡಿನ ಸಿದ್ಧತೆಯನ್ನು ಕಳೆದ 22 ವರ್ಷಗಳಿಂದ ಮೂಡಬಿದರೆಯ ಗಾಂಧಿನಗರದ ಎಂ. ಪದ್ಮನಾಭ ಸಮಗಾರ ಮಾಡಿಕೊಂಡು ಬಂದಿದ್ದಾರೆ.
ಈ ಚೆಂಡನ್ನು ಗಾಡಿ ಎತ್ತಿನ ದಪ್ಪ ಚರ್ಮ ಹಾಗೂ ತೆಂಗಿನ ನಾರಿನಿಂದ ತಯಾರಿಸಲಾಗುತ್ತದೆ. ಮೊದಲು ದಪ್ಪ ಚರ್ಮವನ್ನು ಆಯ್ಕೆ ಮಾಡಿ ಅದನ್ನು ವೃತ್ತಾಕಾರವಾಗಿ ಕತ್ತರಿಸಿ ಅರ್ಧದವರೆಗೆ ಚರ್ಮದ ದಾರದಿಂದ ಹೊಲಿಯಲಾಗುತ್ತದೆ. ಬಳಿಕ ಅದಕ್ಕೆ ತೆಂಗಿನನಾರು ತುಂಬಿಸಿ ಬಿಗಿದು ಚೆಂಡಿನಾಕಾರಕ್ಕೆ ತಂದು ಸಂಪೂರ್ಣವಾಗಿ ಹೊಲಿಯಲಾಗುತ್ತದೆ. ಹೀಗೆ ಪ್ರತೀ ವರ್ಷವೂ ಹೊಸದಾಗಿ ಚೆಂಡನ್ನು ತಯಾರಿಸಲಾಗುತ್ತದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಹಲವಾರು ದೇವಾಲಯಗಳ ಜಾತ್ರೆಯ ವೇಳೆ ಚೆಂಡು ಉತ್ಸವ ಇರುತ್ತದೆ. ಆದರೆ ಪೊಳಲಿಯ ಚೆಂಡಿನಷ್ಟು ಯಾವುದೂ ಪ್ರಸಿದ್ಧಿಯಲ್ಲ ಅನ್ನೋದೇ ಇಲ್ಲಿನ ವಿಶೇಷವಾಗಿದೆ.
ಮಣೇಲ್ ಹಾಗೂ ಅಮ್ಮುಂಜೆ ಎಂಬ ಎರಡು ಊರಿನವರು ಈ ಚೆಂಡಾಟವನ್ನು ಆಡುತ್ತಾರೆ. ಚೆಂಡಾಡಲು ಕೈಕಂಬ ಮಟ್ಟಿ ಮನೆತನದವರು ಎರಡೂ ಕಡೆಯವರನ್ನು ಆಹ್ವಾನಿಸುವ ಸಂಪ್ರದಾಯವಿದೆ. ಪರ್ತಕಂಡ ಬ್ರಾಹ್ಮಣ ಮನೆತನದವರು ಚೆಂಡನ್ನು ಗದ್ದೆಗೆ ಎಸೆಯುತ್ತಾರೆ. ಆಟದ ಆಸಕ್ತಿ ಉಳ್ಳವರು ಮಣೇಲ್-ಅಮ್ಮುಂಜೆ ಊರಿನ ತಂಡದೊಂದಿಗೆ ಸೇರುತ್ತಾರೆ. ಮೂರು ಗೋಲು ಆಗುವವರೆಗೆ ಚೆಂಡಾಡುವ ಸಂಪ್ರದಾಯವಿದೆ. ಇಲ್ಲಿನ ಯುವಕರಿಗೆ ಚೆಂಡಾಟ ಆಡುವುದೇ ಗಮ್ಮತ್ತಾಗಿರುತ್ತದೆ.
ಇತಿಹಾಸ ಪ್ರಸಿದ್ಧವಾದ ಪೊಳಲಿ ಚೆಂಡು ಉತ್ಸವದ ಹಿಂದೆ ಒಂದು ಪೌರಾಣಿಕ ಕಥೆಯೂ ಇದೆ.. ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಚಂಡ ಮುಂಡರೆಂಬ ಇಬ್ಬರು ರಾಕ್ಷಸರ ಕ್ರೌರ್ಯ ಹೆಚ್ಚಾಗಿತ್ತು. ಆಗ ರಾಜರಾಜೇಶ್ವರಿ ದೇವಿಯನ್ನು ಕಾಪಾಡು ತಾಯಿ ಎಂದು ಪ್ರಾರ್ಥಿಸಿದಾಗ ಚಾಮುಂಡೇಶ್ವರಿಯ ಅವತಾರ ತಾಳಿದ ದೇವಿ ಚಂಡ- ಮುಂಡರನ್ನು ರುಂಡವನ್ನು ಕಡಿದು ಚೆಂಡಾಡಿದಳಂತೆ ಎಂಬ ನಂಬಿಕೆ ಇದೆ.ರಾಕ್ಷಸರನ್ನು ಸಂಹರಿಸಿದ ಹಿನ್ನೆಲೆಯಲ್ಲಿ ಚರ್ಮದಲ್ಲಿ ಮಾಡಲಾದ ಚೆಂಡನ್ನು ಕಾಲಿನಲ್ಲಿ ಒದೆಯುವ ಮೂಲಕ ವಿಜಯ ದಿನವನ್ನಾಗಿ ಇಲ್ಲಿನ ಜನರು ಆಚರಿಸುತ್ತಾರೆ. ಒಂದು ತಿಂಗಳ ಕಾಲ ನಡೆಯುವ ಈ ಜಾತ್ರೆಯ ಕಡೇ ಐದು ದಿನ ಪೊಳಲಿ ಚೆಂಡು ಆಟ ನಡೆಯುತ್ತೆ. ಈ ಚೆಂಡು ಉತ್ಸವ ಪುರಲ್ದ ಚೆಂಡು ಎಂದೇ ಪ್ರಸಿದ್ಧಿಯನ್ನು ಪಡೆದಿದೆ.