ಪೊಳಲಿ-ಅಡ್ಡೂರು ಹೊಸಸೇತುವೆ ಸದ್ಯಕ್ಕಿಲ್ಲ.
ಬಂಟ್ವಾಳ: ಪೊಳಲಿ- ಅಡ್ಡೂರು ಸೇತುವೆಯ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದ್ದು, 2026 ರ ಜ.26 ರಂದು ಪೂರ್ಣಗೊಳ್ಳಲಿದೆ.ಸದ್ಯಕ್ಕೆ ಇಲ್ಲಿ ಹೊಸ ಸೇತುವೆಯ ನಿರ್ಮಾಣದ ಬಗ್ಗೆ ಪರಿಗಣಿಸಿರುವುದಿಲ್ಲ ಎಂದು ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಬಂಟ್ವಾಳಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು 610 ಲಕ್ಷ ರೂ.ವೆಚ್ಚದಲ್ಲಿ ಅಡ್ಡೂರು- ಪೊಳಲಿ ಸೇತುವೆಯ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಮಂಗಳೂರು ರಾ.ಹೆ.ಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು,ವಾಹನದಟ್ಟಣೆ ಇರುವ ಅಡ್ಡೂರಿನಲ್ಲಿ ಹೊಸದಾಗಿ ಸೇತುವೆಯನ್ನು ನಿರ್ಮಿಸುವ ಪ್ರಸ್ತಾಪ ಸರಕಾರದ ಮುಂದಿದೆಯೇ ಎಂಬ ಶಾಸಕ ರಾಜೇಶ್ ನಾಯ್ಕ್ ಅವರ ಮರುಪ್ರಶ್ನೆಗೆ ಹೊಸ ಸೇತುವೆ ನಿರ್ಮಾಣಕ್ಕೆ 5 ಕೋ.ರೂ.ವಿನ ಅವಶ್ಯಕತೆ ಇದ್ದು, ಸೇತುವೆಯ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪ್ರಸ್ತುತ ಹೊಸ ಸೇತುವೆಯ ಬಗ್ಗೆ ಪರಿಗಣೊಸಿರುವುದಿಲ್ಲ ಎಂದು ಸಚಿವ ಜಾರಕಿಹೊಳಿ ಲಿಖಿತ ಉತ್ತರ ನೀಡಿದ್ದಾರೆ.
ಕಳೆದ ತಿಂಗಳು ದ.ಕ.ಜಿಲ್ಲಾ ಪ್ರವಾಸದಲ್ಲಿದ್ದ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪೊಳಲಿ- ಅಡ್ಡೂರು ಸೇತುವೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಇಲಾಖಾ ಇಂಜಿನಿಯರ್ ಗಳಿಂದ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರಿಂದ ಪೂರಕ ಮಾಹಿತಿ ಪಡೆದಿದ್ದನ್ನು ನೆನಪಿಸಬಹುದು.
ಇತಿಹಾಸ ಪ್ರಸಿದ್ದ ಪೊಳಲಿ ಕ್ಷೇತ್ರದಲ್ಲಿ ಇದೀಗ ಒಂದುತಿಂಗಳ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು,
ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಲಾಗಿತ್ತಾದರೂ, ಕಾಮಗಾರಿ ಮುಂದಿನ ಜನವರಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರೇ ಈಗ ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ್ದಾರೆ.