ಮಾ.10 ರಮಂದು ಮಾಣಿಯಲ್ಲಿ ಬ್ರಹ್ಮಶ್ರೀ ಶ್ರೀ ನಾರಾಯಣಗುರು ಮಂದಿರ, ಶ್ರೀ ಅನ್ನಪೂರ್ಣೇಶ್ವರಿ ಗುಡಿ ಮತ್ತು ಸಮುದಾಯ ಭವನಕ್ಜೆ ಶಿಲಾನ್ಯಾಸ
ಬಂಟ್ವಾಳ: ಮಾಣಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ವತಿಯಿಂದ ಶ್ರೀ ನಾರಾಯಣಗುರು ಮಂದಿರ, ಶ್ರೀ ಅನ್ನಪೂರ್ಣೇಶ್ವರಿ ಗುಡಿ ಮತ್ತು ಶ್ರೀ ನಾರಾಯಣಗುರು ಸಮುದಾಯ ಭವನದ ಶಿಲಾನ್ಯಾಸ ಹಾಗೂ ಶ್ರೀ ನಾರಾಯಣಗುರು ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಮಾರ್ಚ್ 10ರಂದು ನಡೆಯಲಿದೆ.
ಸಂಘದ ಗೌರವಾಧ್ಯಕ್ಷ ಈಶ್ವರ ಪೂಜಾರಿ ಕಡೇಶಿವಾಲಯ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಸಾಯಿಶಾಂತಿ ಮಣಿನಾಲ್ಕೂರು ಹಾಗೂ ಸುರೇಶ್ ಶಾಂತಿ ಮಿತ್ತೂರು ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದ ಅವರು, ಬೆಳಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಸಂಸದರಾದ ಬೃಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಇಡ್ಕಿದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಸುರೇಶ್ ಪೂಜಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್. ಎಸ್. ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣಗುರು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಸಾಲ್ಯಾನ್, ಮಾಣಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಕೊಪ್ಪರಿಗೆ, ಮಾಣಿ ಗ್ರಾಮ ಸಮಿತಿ ಅಧ್ಯಕ್ಷ ಲೋಕೇಶ ಬಂಗೇರ ಉಪಸ್ಥಿತರಿದ್ದರು.