ಕಡಬ: ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೊತ್ತುಗಳನ್ನು ಧ್ವಂಸಗೊಳಿಸಿದ ವಿದ್ಯಾರ್ಥಿಗಳು

ಶಾಲೆಯಲ್ಲಿ ಹೂವಿನ ಕುಂಡ ಸೇರಿದಂತೆ ಶಾಲೆಯ ಸೊತ್ತುಗಳನ್ನು ವಿದ್ಯಾರ್ಥಿಗಳೇ ಧ್ವಂಸಗೊಳಿಸಿದ ಘಟನೆ ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳೇ ಈ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು ಶಾಲೆಯ ಹೂವಿನ ಕುಂಡ, ಹೂವಿನ ಗಿಡಗಳು ಮತ್ತು ವಾಲಿಬಾಲ್ ನೆಟ್ಗೆ ಹಾನಿ ಮಾಡಿದ್ದಾರೆ. ಕಸದ ಬುಟ್ಟಿಯಲ್ಲಿದ್ದ ಕಸವನ್ನು ಚೆಲ್ಲಾಪಿಲ್ಲಿ ಮಾಡಿ, ಪಪ್ಪಾಯಿ ಗಿಡವನ್ನು ಮುರಿದು ಹಾಕಿದ್ದಾರೆ.
ಶಾಲೆಯ ಸೂಚನಾ ಫಲಕವನ್ನು ಕೂಡ ಹೊಡೆದು ಹಾಕಿದ್ದಾರೆ. ಜೊತೆಗೆ ಶಾಲಾ ಆವರಣದಲ್ಲಿನ ಬಾಳೆ ಮರದ ಗೊನೆಯನ್ನು ಕತ್ತರಿಸಿ ಶಾಲಾ ಆವರಣದಲ್ಲಿ ಎಸೆದು ಬಾಳೆಕಾಯಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಶಾಲೆಯ ನೀರಿನ ಟ್ಯಾಪ್ ಕೂಡ ಹೊಡೆದು ಹಾಕಿದ್ದಾರೆ. ರಜೆಯ ದಿನವಾಗಿದ್ದರೂ, ಮುಖ್ಯೋಪಾಧ್ಯಾಯರು ಮಧ್ಯಾಹ್ನದವರೆಗೆ ಶಾಲೆಯಲ್ಲಿ ಇದ್ದು, ನಂತರ ಕೆಲಸದ ನಿಮಿತ್ತ ಪುತ್ತೂರಿಗೆ ತೆರಳಿದ್ದರು. ಈ ವೇಳೆ ಈ ಕೃತ್ಯ ನಡೆದಿದೆ. ಇದೀಗ ಈ ಬಗ್ಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರು, ಶಿಕ್ಷಕರು ಮತ್ತು ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.