ಕಡಬ: ಶಾಲಾ ಕಟ್ಟಡ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ, ಎಂಜಿನಿಯರ್, ಮುಖ್ಯಶಿಕ್ಷಕ ಅಮಾನತು

ಕಡಬ: ಜಿಲ್ಲೆಯ ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಒಂದು ಭಾಗ ಕುಸಿದು ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಘಟನೆ ಮಂಗಳವಾರ ನಡೆದಿದ್ದು ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕಟ್ಟಡದ ಒಂದು ವಿಭಾಗ ದುರಸ್ಥಿತಿ ಮಾಡುತ್ತಿದ್ದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್, ಈ ಕುಸಿತ ಉಂಟಾದಾಗ ಹೆಚ್ಚಿನ ಮಕ್ಕಳು ಅಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಘಟನೆಯಿಂದ ಏಳನೇ ತರಗತಿಯ ರಶ್ಮಿ, ದೀಕ್ಷಾ, ಫಾತಿಮಾ ಸುಹಾನಾ ಮತ್ತು ಯಶಿತಾ ಗಾಯಗೊಂಡ ವಿದ್ಯಾರ್ಥಿಗಳನ್ನು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ಸಂಗಪ್ಪ ಹುಕ್ಕೇರಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿದ್ದಾರೆ.
ಶಾಲಾ ಕಟ್ಟಡದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಜೆಸಿಬಿ ಯಂತ್ರ ಬಳಸಿ ಟ್ರೆಂಚ್ ತೋಡುತ್ತಿದ್ದ ವೇಳೆ ಈ ಕುಸಿತ ಸಂಭವಿಸಿದೆ. ಇದರಿಂದ ಪಕ್ಕದಲ್ಲಿದ್ದ ಕಟ್ಟಡಕ್ಕೆ ಹಾನಿ ಉಂಟಾಗಿ ಅದರ ಛಾವಣಿ ಸೇರಿದಂತೆ ಕಟ್ಟಡವು ಕುಸಿದಿದೆ. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು, ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ರಕ್ಷಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರಿನ ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. 75 ವರ್ಷಗಳಷ್ಟು ಹಳೆಯದಾದ ಈ ಶಾಲೆಯು ರೂ. 1.5 ಲಕ್ಷ ಪ್ರವಾಹ ಹಾನಿ ಯೋಜನೆ ಅಡಿಯಲ್ಲಿ ಅನುದಾನವನ್ನು ನೀಡಲಾಗಿತ್ತು. ಕುಸಿದ ಕಟ್ಟಡವು ಸರಿಸುಮಾರು 50 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಸರಿಯಾದ ಅಡಿಪಾಯವನ್ನು ಹೊಂದಿಲ್ಲ ಎಂದು ಹೇಳಲಾಗಿದೆ.