
ಮಂಗಳೂರು: ಸುಮಾರು 800 ವರ್ಷಗಳ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನ ಬಜ್ಪೆ ಸಮೀಪದ ಎಂಎಸ್ಇಝಡ್ ವ್ಯಾಪ್ತಿಯಲ್ಲಿದೆ. ಇಲ್ಲಿನ ನೆಲ್ಲಿದಡಿ ಗುತ್ತುಮನೆ ಪ್ರವೇಶಕ್ಕೆ ಹಾಗೂ ಕಾಂತೇರಿ ಜುಮಾದಿ ದೈವದ ನಿತ್ಯ ಆರಾಧನೆಗೆ ತಡೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಂತಾರ ಸಿನಿಮಾ ರೀತಿಯಲ್ಲೇ ದೈವಾರಾಧನೆಗೆ ಅಧಿಕಾರಿಗಳಿಂದ ಅಡ್ಡಿ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರದೇಶವನ್ನು 2006ರಲ್ಲಿ ವಿಶೇಷ ಆರ್ಥಿಕ ವಲಯ ಎಂದು ಘೋಷಿಸಿ ಇಡೀ ಊರಿಗೆ ಊರನ್ನೇ ಸರ್ಕಾರ ಒಕ್ಕಲೆಬ್ಬಿಸಿತ್ತು. ಸುಮಾರು 3 ಸಾವಿರ ಎಕರೆ ಭೂಮಿ ಎಂಎಸ್ಇಝಡ್ ವಶವಾದರೂ ಕಾಂತೇರಿ ಜುಮಾದಿ ದೈವಸ್ಥಾನ ಉಳಿದಿತ್ತು. ಇದರ ನಡುವೆ ಅದೆಷ್ಟೋ ದೇವಸ್ಥಾನ, ದೈವಸ್ಥಾನ ,ಮಸೀದಿ, ಚರ್ಚ್ಗಳು ನೆಲಸಮವಾಗಿದ್ದವು. ಆದರೂ ದೈವದ ಕಾರ್ಣಿಕದ ಫಲವಾಗಿ ಕಾಂತೇರಿ ಜುಮಾದಿ ದೈವದ ಐತಿಹಾಸಿಕ ಸ್ಥಳ ಉಳಿದಿತ್ತು.

ಹೋರಾಟದ ಫಲವಾಗಿ 2016ರಲ್ಲಿ ಸ್ಮಾರಕದ ರೀತಿ ನೆಲ್ಲಿದಡಿ ಗುತ್ತನ್ನು ಜಿಲ್ಲಾಡಳಿತ ಉಳಿಸಿಕೊಂಡಿತ್ತು. ಕೇವಲ ದೈವಾರಾಧನೆಗೆ ಮಾತ್ರ ವಿಶೇಷ ಅನುಮತಿ ನೀಡಿ ನೆಲ್ಲಿದಡಿ ಗುತ್ತಿಗೆ ಹೋಗಲು MSEZ ಅವಕಾಶ ನೀಡುತ್ತಿತ್ತು. ಪ್ರತಿ ಬಾರಿ ದೈವಾರಾಧನೆಗಾಗಿ ಒಳ ಹೋಗುವಾಗ ಅನುಮತಿ ಪಡೆದು ನೆಲ್ಲಿದಡಿ ಗುತ್ತಿನ ಪ್ರಮುಖರು ಹೋಗುತ್ತಿದ್ದರು.
