ಬಂಟ್ವಾಳ: ಸೇವಾಂಜಲಿ ಸಭಾಂಗಣದಲ್ಲಿ ಕ್ಷಯ ರೋಗಿಗಳಿಗೆ ದವಸಧಾನ್ಯದ ಕಿಟ್ ವಿತರಿಸಿದ ಡಾ. ಶ್ರೀನಿವಾಸ್ ಮಯ್ಯ ಡಿ

ಬಂಟ್ವಾಳ: ಕ್ಷಯರೋಗ ಗುಣವಾಗುವ ಕಾಯಿಲೆ, ಸರಿಯಾದ ಪೌಷ್ಠಿಕ ಆಹಾರ ಸೇವನೆ ಹಾಗೂ ಚಿಕಿತ್ಸಾ ಪದ್ದತಿಯಿಂದ ಅನೇಕ ಮಂದಿ ರೋಗಮುಕ್ತರಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ. ಕೇಂದ್ರ ಸರಕಾರದ ಈ ಯೋಜನೆಯನ್ನು ಸೇವಾಂಜಲಿ ಸಂಸ್ಥೆ ಕ್ಷಯ ರೋಗಿಗಳಿಗೆ ಒದಗಿಸುವ ಮೂಲಕ ಅವರ ಬಾಳಿಗೆ ಆಶಾಕಿರಣವಾಗಿದೆ ಎಂದು ವಳಚ್ಚಿಲ್‌ನ ಶ್ರೀನಿವಾಸ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಶ್ರೀನಿವಾಸ್ ಮಯ್ಯ ಡಿ. ಹೇಳಿದರು.ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಕ್ಷಯ ರೋಗಿಗಳಿಗೆ ದವಸಧಾನ್ಯದ ಕಿಟ್ ವಿತರಿಸಿ ಅವರು ಮಾತನಾಡಿದರು.
ಉದ್ಯಮಿ ತೇವು ತಾರಾನಾಥ ಕೊಟ್ಟಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೃಷ್ಣ ಕುಮಾರ್ ಪೂಂಜ ಅವರು ಸ್ವಂತಕ್ಕಿಂತ ಸಮಾಜಕ್ಕೆ ಹೆಚ್ಚು ಸಮಯವನ್ನು ಮೀಸಲಿಟ್ಟು ಸೇವಾಕಾರ್ಯಗಳನ್ನು ಮಾಡಿದವರು. ಪ್ರಧಾನ ಮಂತ್ರಿಯವರ ಕರೆಯ ಮೇರೆಗೆ ಪ್ರತೀ ತಿಂಗಳು ಕ್ಷಯ ರೋಗಿಗಳಿಗೆ ಆಹಾರದ ಕಿಟ್ ನೀಡಿ ಸ್ವಸ್ಥ ಸಮಾಜ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ ಎಂದರು.
ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಪೌಷ್ಠಿಕ ಆಹಾರದ ಕೊರತೆಯಿದ್ದವರಿಗೆ ಕ್ಷಯ ರೋಗ ಬೇಗ ಆಕ್ರಮಿಸಿಕೊಳ್ಳುತ್ತದೆ. ಆದ್ದರಿಂದ ರೋಗ ಗುಣಮುಖವಾಗಬೇಕಾದರೆ ಪೌಷ್ಠಿಕ ಆಹಾರವನ್ನು ಸರಿಯಾಗಿ ಸೇವಿಸಬೇಕು. ರೋಗ ಮುಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕ್ಷಯ ಶಾಪವಲ್ಲ, ಗುಣವಾಗದ ರೋಗವಲ್ಲ. ಆದರೆ ಎಚ್ಚರಿಕೆ ಅತೀ ಅಗತ್ಯ ಎಂದರು.ತುಂಬೆ ವಲಯದ ಆಶಾಕಾರ್ಯಕರ್ತೆ ಲಕ್ಷ್ಮೀ ದೇವದಾಸ್ ಶೆಟ್ಟಿ, ಕೃಷ್ಣಪ್ಪ ಪೂಜಾರಿ,ಕೃಷ್ಣ ತುಪ್ಪೆಕಲ್ಲು,ನಾರಾಯಣ ಬಡ್ಡೂರು, ಸುರೇಶ್ ರೈ ಪೆಲಪಾಡಿ, ಪ್ರಶಾಂತ್ ತುಂಬೆ, ವಿಕ್ರಂ ಫರಂಗಿಪೇಟೆದಿನೇಶ್ ತುಂಬೆ, ಜಯ ರಾಮಲ್ ಕಟ್ಟೆ ಉಪಸ್ಥಿತರಿದ್ದರು. ದೇವದಾಸ್ ಶೆಟ್ಟಿ ಕೊಡ್ಮಾನ್ ಕಾರ್ಯಕ್ರಮ ನಿರೂಪಿಸಿದರು.