ಎಂಟನೇ ಬಜೆಟ್ನಲ್ಲಿ ಕೆಲ ದೊಡ್ಡ ಅಚ್ಚರಿ, ಬಜೆಟ್ ಗಾತ್ರ ಎಷ್ಟು ಗೊತ್ತಾ?

ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಂಟನೇ ಬಜೆಟ್ನಲ್ಲಿ ಕೆಲ ದೊಡ್ಡ ಅಚ್ಚರಿಗಳನ್ನು ನೀಡಿದ್ದಾರೆ. ಈ ಬಾರಿ ಅವರ ಬಜೆಟ್ ಗಾತ್ರ 50 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದೆ. 50,65,345 ಕೋಟಿ ರೂ ಗಾತ್ರದ ಬಜೆಟ್ ನೀಡಿದ್ದಾರೆ. ತೆರಿಗೆಗಳು, ಸಾಲಗಳು ಇತ್ಯಾದಿ ಮೂಲಗಳಿಂದ ಸರ್ಕಾರ ಇಷ್ಟು ಹಣ ಕಲೆಹಾಕಿದೆ. ತೆರಿಗೆ ಮೂಲಗಳಿಂದಲೇ ಸರ್ಕಾರಕ್ಕೆ ಅರ್ಧಕ್ಕಿಂತ ಹೆಚ್ಚು ಆದಾಯ ಸಿಗುತ್ತದೆ.
ಸರ್ಕಾರ ಹಣ ಹೇಗೆ ಹೊಂದಿಸುತ್ತದೆ?
ತೆರಿಗೆಗಳಿಂದ: 28.37 ಲಕ್ಷ ಕೋಟಿ ರೂ
ಠೇವಣಿ, ಬಾಂಡ್ ಇತ್ಯಾದಿ ಸಾಲಗಳಿಂದ: 16.45 ಲಕ್ಷ ಕೋಟಿ ರೂ
ತೆರಿಗೆಯೇತರ ಆದಾಯ: 5.83 ಲಕ್ಷ ಕೋಟಿ ರೂ
ಒಟ್ಟು ಆದಾಯ: 50.65 ಲಕ್ಷ ಕೋಟಿ ರೂ
ಇಲ್ಲಿ ತೆರಿಗೆ ವಿಚಾರಕ್ಕೆ ಬಂದರೆ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳು ಒಳಗೊಂಡಿವೆ. ಅಬಕಾರಿ ಸುಂಕ, ಜಿಎಸ್ಟಿ, ಆಮದು ತೆರಿಗೆ ಇತ್ಯಾದಿಯವರು ಪರೋಕ್ಷ ತೆರಿಗೆಗೆ ಬರುತ್ತವೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಇತ್ಯಾದಿಯವು ನೇರ ತೆರಿಗೆಗೆ ಸೇರುತ್ತದೆ. ಇವೆಲ್ಲವೂ ಸೇರಿ ಒಟ್ಟು 42.70 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹ ಆಗುತ್ತದೆ. ರಾಜ್ಯಗಳಿಗೆ ಹಂಚಿಕೆ ಮಾಡಿದ್ದನ್ನು ಕಳೆದರೆ 28.37 ಲಕ್ಷ ಕೋಟಿ ರೂ ನಿವ್ವಳ ತೆರಿಗೆ ಉಳಿಯುತ್ತದೆ.