ವಿಜಯಪುರ: ಗುಂಡು ಹಾರಿಸಿ ವ್ಯಕ್ತಿಯ ಬರ್ಬರ ಹತ್ಯೆ, ಕೊಲೆಗೆ ಯುವತಿ ಕರಿನೆರಳು ಕಾರಣ

ವಿಜಯಪುರ ಜಿಲ್ಲೆಯಲ್ಲಿ ಹಾಡು ಹಗಲೇ ಗುಂಡಿನ ದಾಳಿ ನಡೆದಿದೆ. ಕಾರಿನ ಮೇಲೆ ಗುಂಡು ಹಾರಿಸಿ ಓರ್ವ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಬಳಿ ಈ ಘಟನೆ ನಡೆದಿದೆ. ಸತೀಶ ರಾಠೋಡ್ ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಮೇಶ ಚೌವ್ಹಾಣ್ ಹಾಗೂ ಇತರರಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ಸತೀಶ್ ಮೇಲೆ ದಾಳಿ ಮಾಡಿದ ಒರ್ವ ಹಲ್ಲೆಕೋರನ ಕಿವಿ ತುಂಡಾಗಿ ಬಿದ್ದಿದೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಇತರೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಈ ಘಟನೆಯಿಂದ ಸತೀಶ್ ಕುಟುಂಬಸ್ಥರ ಕಣ್ಣೀರು ಹಾಕಿದ್ದಾರೆ.
ಈ ಕೊಲೆಗೆ ಒರ್ವ ಯುವತಿ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಸಾವನ್ನಪ್ಪಿರುವ ಸತೀಶ್ ತಂದೆ ಪ್ರೇಮಸಿಂಗ್ ಆರೋಪ ಮಾಡಿದ್ದಾರೆ. ರಮೇಶ್ ಚೌವ್ಹಾನ್ ಪುತ್ರಿಯನ್ನ ಸತೀಶ್ ಮದುವೆಯಾಗಲು ಗುರು ಹಿರಿಯರ ಸಮ್ಮುಖದಲ್ಲಿ ಕೇಳಲಾಗಿತ್ತು. ಕಳೆದ ಒಂದೂವರೆ ವರ್ಷದ ಹಿಂದೆ ರಮೇಶ್ ಮಗಳ ಜೊತೆ ಸತೀಶ್ ವಿವಾಹ ಪ್ರಾಪ್ತಾಪ ನಡೆದಿತ್ತು. ಸತೀಶ್ ಗೆ ನನ್ನ ಮಗಳನ್ನು ಕೊಡಲ್ಲ ಎಂದು ಖಡಾಖಂಡಿತವಾಗಿ ರಮೇಶ ಹೇಳಿದ್ದ. ಇದಾದ ಬಳಿಕ ಒಂದು ವರ್ಷದ ಹಿಂದೆ ರಮೇಶ್ ಮಗಳು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಇದಕ್ಕೆ ಕಾರಣವೇ ಸತೀಶ್ ಎಂಬ ಸಿಟ್ಟು ರಮೇಶ ಹಾಗೂ ಸಹಚರಿಗೆ ಇತ್ತು. ಇದೇ ಸಿಟ್ಟಲ್ಲಿ ಸತೀಶ್ಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆದರೆ ತನಿಖೆ ನಂತರವೇ ಸತ್ಯಾಂಶ ಹೊರಬರಬಹುದು ಎಂದು ಪೊಲೀಸರು ಹೇಳಿದ್ದಾರೆ.