ಬಂಟ್ವಾಳ ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ
ಬಂಟ್ವಾಳ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತಮ್ಮದೇ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಿದಾಗ ದೇಶದ ಪ್ರಗತಿ ಸಾಧ್ಯವಾಗಲಿದೆ. ಮನುಷ್ಯತ್ವದ ಮೂಲಕ ಕಾರ್ಯ ನಿರ್ವಹಿಸಿದಾಗ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ನಡೆದ 76ನೇ ಬಂಟ್ವಾಳ ತಾಲೂಕುಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಹಶೀಲ್ದಾರ್ ಅರ್ಚನ ಡಿ. ಭಟ್ ಗಣರಾಜ್ಯೋತ್ಸವ ಸಂದೇಶ ನೀಡಿ ಸಂವಿಧಾನದ ಪೂರ್ವಪೀಠಿಕೆಯಲ್ಲಿ ದೇಶದ ಆತ್ಮ ಅಡಗಿದೆ. ನಮ್ಮ ದೇಶದ ಸಂವಿಧಾನ ಸುಂದರವಾಗಿದೆ.ಇದರ ಆಳಕ್ಕೆ ಹೋದಂತೆ ಸಂವಿಧಾನದ ಮಹತ್ವ ಅರಿವಾಗುತ್ತದೆ. ಸಂವಿಧಾನ ದೇಶದ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ ಎಂದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 7 ನೇ ತರಗತಿ ವಿದ್ಯಾರ್ಥಿ ನಿನಾದ್ ಕೈರಂಗಳ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸುಪೂಜಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು.
ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ವಂದಿಸಿದರು, ಕಂದಾಯ ಇಲಾಖೆಯ ಶ್ರೀ ಕಲಾ ಕಾರಂತ್ ನಿರೂಪಿಸಿದರು.
ಧ್ವಜಾರೋಹಣ:
ಬೆಳಿಗ್ಗೆ ತಹಶೀಲ್ದಾರ್ ಅರ್ಚನಾ ಭಟ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ರಾಜೇಶ್ ನಾಯ್ಕ್ ,ಬೂಡ ಅಧ್ಯಕ್ಷ ಬೇಬಿ ಕುಂದರ್, ಪುರಸಭೆ ಉಪಾಧ್ಯಕ್ಷ ಮೊನೀಶ್ ಅಲಿ, ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಇಒ ಸಚಿನ್ ಕುಮಾರ್ ಗೌರವ ವಂದನೆ ಸ್ವೀಕರಿಸಿದರು.
ಪೊಲೀಸ್, ಮಾಜಿ ಸೈನಿಕರ ದಳ, ಗೃಹರಕ್ಷದಳ, ವಾದ್ಯ ತಂಡ ಹಾಗೂ ವಿದ್ಯಾರ್ಥಿಗಳ ತಂಡ ಪಥಸಂಚಲನದಲ್ಲಿ ಭಾಗಿಯಾದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.