ಬಂಟ್ವಾಳ: ಶ್ರೀ ವೀರ ಹನುಮಾನ್ ಮಂದಿರದ 23ನೇ ವಾರ್ಷಿಕೋತ್ಸವ

ಬಂಟ್ವಾಳ: ತ್ಯಾಗ ಮತ್ತು ಸೇವೆ ಭಾರತ ದೇಶದ ಮೌಲ್ಯ ಮತ್ತು ಆದರ್ಶಗಳಾಗಿದೆ. ದತ್ತನಗರ ಎಂದರೆ ಭಗವಂತನು ಇತ್ತನಗರ ಎಂದರ್ಥ. ಅಹಂಕಾರ, ಮಮಕಾರ ಇದ್ದಲ್ಲಿ ಭಗವಂತನಿರುವುದಿಲ್ಲ. ದತ್ತನಗರದಲ್ಲಿ ನಾನು ಎಂಬ ಭಾವ ಇಲ್ಲದೇ ಇರುವುದರಿಂದ ಭಗವಂತ ಇಲ್ಲಿ ನೆಲೆಸಿದ್ದಾನೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಪುದು ಗ್ರಾಮದ ಸುಜೀರು ದತ್ತನಗರ ಶ್ರೀ ವೀರ ಹನುಮಾನ್ ಮಂದಿರದ 23ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭಾರತದ ಸೌಂದರ್ಯ ಆಧ್ಯಾತ್ಮಿಕತೆಯಲ್ಲಿ ಅಡಗಿದೆ. ಆಧ್ಯಾತ್ಮ ಇದ್ದಲ್ಲಿ ಸಾಮರಸ್ಯದ ಬದುಕು ಇದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಭಜನೆಯ ಮುಖಾಂತರ ದೇವರನ್ನು ಕಾಣಲು ಸಾಧ್ಯವಿದೆ. ಭಜನೆ ಇದ್ದಲ್ಲಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ 23 ವರ್ಷದಿಂದ ಭಜನೆ ನಡೆಯುತಿದ್ದು ಭಗವಂತನ ಸಾಕ್ಷತ್ಕಾರವಾಗುವುದರ ಜೊತೆಗೆ ಹಿಂದೂ ಸಮಾಜ ಸಂಘಟಿತವಾಗಿದೆ ಎಂದರು.
ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಕೊಡ್ಮಾಣ್ ಜಗತ್ತಿಗೆ ಜ್ಞಾನದ ಬೆಳಕು ನೀಡಿರುವುದು ಹಿಂದೂ ಧರ್ಮ. ಅದನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು. ಗುತ್ತಿಗೆದಾರ ಮನೋಹರ್ ಡಿ ದೇವಾಡಿಗ, ವಕೀಲೆ ಸುಚಿತ್ರಾ ಅವಿನಾಶ್, ಪುದು ಗ್ರಾ.ಪಂ. ಸದಸ್ಯ ವಿಶು ಕುಮಾರ್, ಆಶಿತ್ ಕುಮಾರ್ ಶೆಟ್ಟಿ, ಐತಪ್ಪ ಆಳ್ವ ಸುಜೀರುಗುತ್ತು ಭಾಗವಹಿಸಿದ್ದರು.
ಮಂದಿರದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ದತ್ತನಗರ ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಗಣೇಶ್ ಸುಜೀರು ಉಪಸ್ಥಿತರಿದ್ದರು. ವಿಧಾನಪರಿಷತ್ತ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದರು. ನಾಗೇಶ್ ಅಮೀನ್ ಸ್ವಾಗತಿಸಿದರು. ಮಂದಿರದ ಅಧ್ಯಕ್ಷ ಸುರೇಂದ್ರ ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಮೋದರ ಸಪಲ್ಯ ವಂದಿಸಿದರು, ರಮ್ಯ ರಂಜನ್ ಸುವರ್ಣ ಸುಜೀರು, ಮೀನಾಕ್ಷಿ ಉದ್ಯಾವರ ಹಾಗೂ ಗಣೇಶ್ ದತ್ತನಗರ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಪೊಳಲಿ ಗಿರಿಪ್ರಕಾಶ್ ತಂತ್ರಿ ನೇತೃತ್ವದಲ್ಲಿ ಗಣಹೋಮ, ಪಂಚಾಮೃತ ಅಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಪೂಜೆ ನಡೆಯಿತು. ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.