ಬಂಟ್ವಾಳ: ವೀರಕಂಬ ಗ್ರಾಮ ಅರಣ್ಯ ಸಮಿತಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ

ಬಂಟ್ವಾಳ: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ,ಬಂಟ್ವಾಳ ವಲಯ ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ಸಂರಕ್ಷಣಾ ಯೋಜನೆಯಲ್ಲಿ ಸ್ಥಾಪಿಸಲಾದ ವೀರಕಂಬ ಗ್ರಾಮ ಅರಣ್ಯ ಸಮಿತಿಯ 2023- 24 ನೇ ಸಾಲಿನ ವಾರ್ಷಿಕ ಮಹಾಸಭೆಯು ಶ್ರೀನಿಕೇತನ ಮಂದಿರದಲ್ಲಿ ನಡೆಯಿತು. ವಲಯ ಅರಣ್ಯಾಧಿಕಾರಿ ಸುನಿಲ್ ಜೆ.ಬಿ. ಡಿಸೋಜ ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಅರಣ್ಯ ಸಂಪತ್ತನ್ನು ಉಳಿಸಿಕೊಂಡು ಪೋಷಣೆ ಮಾಡುವ ಜವಾಬ್ದಾರಿ ಗ್ರಾಮಸ್ಥರಿಗೂ ಇದೆ. ಅಧಿಕಾರಿಗಳು ಇಲಾಖೆಯಲ್ಲಿ ಕರ್ತವ್ಯದ ದೃಷ್ಟಿಯಿಂದ ಇರುತ್ತಾರೆ. ಆದರೆ ಗ್ರಾಮದ ಜನರ ಭವಿಷ್ಯದ ದೃಷ್ಟಿಯಿಂದ ಕಾಡು,ನಾಡು ಎರಡನ್ನು ಉಳಿಸಿಕೊಳ್ಳಬೇಕು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ಎಂ ಅವರು ಮಾತನಾಡಿ ಗಸ್ತು ಅರಣ್ಯ ಪಾಲಕರ ವಸತಿಗೃಹ ಹಳೆಯದಾಗಿದ್ದು, ನೂತನ ವಸತಿಗೃಹದ ಅತೀ ಅಗತ್ಯವಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸುವಂತೆ ಮನವಿ ಮಾಡಿದರಲ್ಲದೆ ಗ್ರಾಮ ಅರಣ್ಯ ಸಮಿತಿಗೂ ಕಟ್ಟಡದ ಅವಶ್ಯಕತೆಯಿದೆ ಎಂದರು.
ಪ್ರತಿ ವರ್ಷ ಈ ಭಾಗದ ಅರಣ್ಯಕ್ಕೆ ಬೆಂಕಿ ಬೀಳುತ್ತಿದ್ದು ,ಬೇಸಿಗೆ ಕಾಲದಲ್ಲಿ ಹೆಚ್ಚುವರಿಯಾಗಿ ಅರಣ್ಯ ವೀಕ್ಷಕ ಮತ್ತು ಅಗ್ನಿಶಾಮಕದಳ ವಾಹನದ ಬೇಡಿಕೆಯನ್ನು ಅವರು ಈ ಸಂದರ್ಭ ಅಧಿಕಾರಿಗಳ ಮುಂದಿಟ್ಟರು. ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಸಾದ್ ಶೆಟ್ಟಿ, ಕಲ್ಲಡ್ಕ ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೊರಗಪ್ಪ ಗೌಡ, ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳಾದ ಚಂದ್ರಶೇಖರ್ ಬಾಯಿಲ, ಎಂ ಆರ್ ನೋಣಯ್ಯ ಅಬ್ದುಲ್ ಖಾದರ್ , ಮೀನಾಕ್ಷಿ, ಬೇಬಿ ಜೆ ಅಳ್ವ, ಗಿರಿಜಾ ಉಪಸ್ಥಿತರಿದ್ದರು.
ಅರಣ್ಯ ಸಮಿತಿ ಸದಸ್ಯೆ ತೇಜಾಕ್ಷಿ ಸ್ವಾಗತಿಸಿದರು.ಉಪವಲಯ ಅರಣ್ಯಾಧಿಕಾರಿರವಿರಾಜ ಬಿ .ವರದಿ ವಾಚಿಸಿದರು.
ರೇವತಿ ವಂದಿಸಿದರು.ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.ಅರಣ್ಯಪಾಲಕರಾದ ಶೋಭಿತ್ ಕುಮಾರ್, ದಯಾನಂದ, ಅರಣ್ಯ ವೀಕ್ಷಕ ಪ್ರವೀಣ್ ಕೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.