ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.

ಮುಂಜಾನೆ ಶ್ರೀ ದೇಗುಲದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಾನ ನೆರವೇರಿಸಿದರು. ಆ ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.

ಎಲ್ಲಾ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ ಆರಂಭವಾದರೆ ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿತ್ತು. ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಂಪನ್ನಗೊಂಡಿತು. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ದೇವರ ಕೊಪ್ಪರಿಗೆ ಅನ್ನ ಪ್ರಸಾದ ಸ್ವೀಕರಿಸಿದರು.
ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣದ ಸುತ್ತಲೂ ನೀರನ್ನು ಮಧ್ಯಾಹ್ನದ ನಂತರ ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು.

ದೇವಳದ ಆನೆ ಯಶಸ್ವಿಯು ಹೊರಾಂಗಣದಲ್ಲಿ ನೀರು ತುಂಬಿಸುವುದರೊಂದಿಗೆ ಸಂಭ್ರಮ ಪಟ್ಟಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿದ್ದು, ತಾನು ಖುಷಿ ಪಡುವುದರೊಂದಿಗೆ, ಭಕ್ತಾಧಿಗಳಿಗೂ ಸಂತೋಷವನ್ನು ನೀಡಿತು.

By suddi9

Leave a Reply

Your email address will not be published. Required fields are marked *