ಹಿಂದೂ ಸಮಾಜ ಬಲಷ್ಠವಾಗಲು ಧಾರ್ಮಿಕ ಕಾರ್ಯಗಳು ಪ್ರೇರಣೆ :ಡಾ ಪ್ರಭಾಕರ ಭಟ್
ಬಂಟ್ವಾಳ :ಹಿಂದೂ ಸಮಾಜವು ಇನ್ನಷ್ಟು ಬಲಿಷ್ಠ ಹಾಗೂ ಬದಲಾವಣೆಗಾಗಿ ಶನಿ ಪೂಜೆಯಂತ ಧಾರ್ಮಿಕ ಕಾರ್ಯಕ್ರಮಗಳು ಪ್ರೇರಣೆಯಾಗಿದ್ದು, ಶನಿ ದೇವರು ಸಮಾಜದಲ್ಲಿರುವ ಕೆಡುಕನ್ನು ಅಳಿಸಿ ಒಳಿತನ್ನು ಮಾಡಲಿ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ತಾಲೂಕಿನ ನೆತ್ತರಕೆರೆ ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಶನೈಶ್ಚರ ಪೂಜಾ ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ ಶನಿವಾರ ರಾತ್ರಿ ನಡೆದ ಸಾಮೂಹಿಕ ಶನೈಶ್ಚರ ಪೂಜೆಯ ಪ್ರಯುಕ್ತ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲರಿಗೂ ಒಳಿತನ್ನು ಬಯಸುವ ಧರ್ಮವೊಂದಿದ್ದರೆ ಅದು ಹಿಂದೂ ಧರ್ಮ, ವಿಶಾಲ ದೃಷ್ಟಿಕೋನ ಹೊಂದಿರುವ ಹಿಂದೂ ಸಮಾಜಕ್ಕೆ ಸಾವಿರಾರು ವರುಷಗಳ ಇತಿಹಾಸವಿದ್ದು, ಶ್ರೀ ರಾಮನನ್ನು ಆದರ್ಶವಾಗಿಟ್ಟುಕೊಂಡು ಗ್ರಾಮ ವಿಕಾಸದ ಮೂಲಕ ರಾಮ ರಾಜ್ಯದ ಕನಸು ಸಕಾರಗೊಳ್ಳಲಿ ಎಂದರು.
ದ ಕ ಜಿಲ್ಲಾ ಕೊಟ್ಟಾರಿ ಸಮಾಜದ ಸುಧಾರಕ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅವರು ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ಧರ್ಮದ ಧಾರ್ಮಿಕ ಆಚಾರ, ವಿಚಾರಗಳನ್ನು ಅರಿತು ಬಾಳಿದರೆ ಸಮಾಜ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಗ್ರಾಮ ವಿಕಾಸ ಸಂಯೋಜಕ ಜೀತೆಂದ್ರ ಪ್ರತಾಪನಗರ, ಬಂಟ್ವಾಳ ತಾಲೂಕು ಸಂಘ ಚಾಲಕ ಡಾ ಬಾಲಕೃಷ್ಣ, ಶನೈಶ್ಚರ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ರಘುನಾಥ ಸಪಲ್ಯ, ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕ ಸಂತೋಷ್ ಕುಮಾರ್ ನೆತ್ತರಕೆರೆ ಉಪಸ್ಥಿತರಿದ್ದರು.
ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ,ಸಮಿತಿಯ ಕಾರ್ಯದರ್ಶಿ ವಿದ್ಯಾರಾಜ್ ಕಾಪಿಕಾಡ್ ವಂದಿಸಿದರು, ಸಂಘಟಕ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ವೇದಮೂರ್ತಿ ಮುರಳಿ ಭಟ್ ಕಲ್ಲತಡಮೆ ಪೌರೋಹಿತ್ಯದಲ್ಲಿ
ವಿವಿಧ ವೈಧಿಕ ವಿಧಿವಿಧಾನಗಳು ರಾತ್ರಿ ಅನ್ನಸಂತರ್ಪಣೆ ನಡೆಯಿತು. ಬಳಿಕ ಯಕ್ಷಗಾನ ಬಯಲಾಟ ನಡೆಯಿತು.
ಶನಿ ಪೂಜಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರ ಪೊಳಲಿಗೆ ಪಾದಯಾತ್ರೆ ಮೂಲಕ ತೆರಳಿ ಚಂಡಿಕಾ ಹೋಮ ಹಾಗೂ ಎಂಟು ದಿವಸಗಳ ಕಾಲ ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಎಳ್ಳುಗಂಟು ದೀಪೋತ್ಸವ ನಡೆಯಿತು.