ಬಂಟ್ವಾಳ: ಪುರಸಭೆ, ಗ್ರಾಮ ಪಂಚಾಯಿತಿ ಉಪಚುನಾವಣೆ ಕಾಂಗ್ರೆಸ್ ಮೇಲುಗೈ, 12ರಲ್ಲಿ 10 ಸ್ಥಾನ ಕಾಂಗ್ರೆಸ್ ತೆಕ್ಕೆಗೆ
ಬಂಟ್ವಾಳ:ಇಲ್ಲಿನ ಪುರಸಭೆಯಲ್ಲಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಗಂಗಾಧರ ಪೂಜಾರಿ ಇವರಿಂದ ತೆರವುಗೊಂಡಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುರುಷೋತ್ತಮ ಎಸ್.ಬಂಗೇರ ಗೆಲುವು ದಾಖಲಿಸಿದ್ದಾರೆ.
ಇನ್ನೊಂದೆಡೆ ಒಟ್ಟು 11 ಗ್ರಾಮ ಪಂಚಾಯಿತಿನಲ್ಲಿ ವಿವಿಧ ಕಾರಣಗಳಿಂದ ತೆರವುಗೊಂಡಿದ್ದ 11 ಮಂದಿ ಗ್ರಾಮ ಪಂಚಾಯಿತಿ ಸದಸ್ಯರ ಪೈಕಿ ಕೇವಲ 2 ಸ್ಥಾನಗಳಿಗೆ ಮಾತ್ರ ಬಿಜೆಪಿ ತೃಪ್ತಿ ಪಟ್ಟುಕೊಂಡರೆ, ಒಟ್ಟು 9 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ದಾಖಲಿಸಿ ಅಚ್ಚರಿ ಮೂಡಿಸಿದ್ದಾರೆ.
ಇಲ್ಲಿನ ಮಂಚಿ ಗ್ರಾಮ ಪಂಚಾಯಿತಿನಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನೂಜಿಪ್ಪಾಡಿ ಮತ್ತು ಬಡಗಬೆಳ್ಳೂರು ಗ್ರಾಮ ಪಂಚಾಯಿತಿನಲ್ಲಿ ಮೋಹನದಾಸ ಕೊಟ್ಟಾರಿ ಗೆಲುವು ಕಂಡಿದ್ದಾರೆ.ಉಳಿದಂತೆ ಅಮ್ಟಾಡಿ ಗ್ರಾಮ ಪಂಚಾಯಿತಿನಲ್ಲಿ ಕಾಂಗ್ರೆಸ್ಸಿನ ಕೇಶವ ಜೋಗಿ, ಪಂಜಿಕಲ್ಲು-ರಾಜೇಶ ಗೌಡ ಮತ್ತು ಕೇಶವ ಪೂಜಾರಿ ಅಸಲ್ದೋಡಿ, ಸಜಿಪಮೂಡ ಕರೀಂ ಬೊಳ್ಳಾಯಿ, ಚೆನ್ನೈತ್ತೋಡಿ-ಜಯಂತಿ ಪೂಜಾರಿ, ಸಜಿಪಮುನ್ನೂರು-ಇಸ್ಮಾಯಿಲ್, ಧನಂಜಯ ಶೆಟ್ಟಿ, ಸೆಲಿನ್, ಪೆರ್ನೆ-ನಳಿನಿ ಗೆಲುವು ಸಾಧಿಸಿದ್ದಾರೆ.
ಈ ಪೈಕಿ ಬಡಗಬೆಳ್ಳೂರು ಗ್ರಾಮ ಪಂಚಾಯಿತಿನಲ್ಲಿ ಕಾಂಗ್ರೆಸ್ಸಿನಿಂದ ಒಂದು ಸ್ಥಾನ ಬಿಜೆಪಿಗೆ ಒಲಿದಿದ್ದು, ಸಜಿಪಮುನ್ನೂರು ಪಂಚಾಯಿತಿನಲ್ಲಿ ಎಸ್ ಡಿ ಪಿ ಐ ನಿಂದ ಮೂರು ಸ್ಥಾನ ಕಾಂಗ್ರೆಸ್ಸಿಗೆ ಬಂದಿದೆ. ಉಳಿದಂತೆ ಎಲ್ಲಾ 7 ಸ್ಥಾನ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ವರ್ಗಾವಣೆಗೊಂಡಿದೆ.
ಕಾಂಗ್ರೆಸ್ಸಿನ ವಿಜೇತ ಅಭ್ಯರ್ಥಿಗಳನ್ನು ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಪುರಸಭಾಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಪಿಯೂಸ್ ಎಲ್.ರಾಡ್ರಿಗಸ್, ಸುದರ್ಶನ್ ಜೈನ್, ಕೆ.ಪದ್ಮನಾಭ ರೈ, ಅಬ್ಬಾಸ್ ಆಲಿ, ಸದಾಶಿವ ಬಂಗೇರ, ಚಂದ್ರಶೇಖರ ಪೂಜಾರಿ, ಸಂಜೀವ ಪೂಜಾರಿ ಮೆಲ್ಕಾರ್, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಮತ್ತಿತರರು ಅಭಿನಂದಿಸಿದರು. ಬಿಜೆಪಿ ಅಭ್ಯರ್ಥಿಗಳನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಮಾಜಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ, ಡೊಂಬಯ ಅರಳ ಮತ್ತಿತರರು ಅಭಿನಂದಿಸಿದರು.