ನಂತೂರು- ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಇದೀಗ ಸಾವಿನ ರಸ್ತೆ, ಪ್ರತಿಭಟನೆ ಕಿಚ್ಚು ಹಚ್ಚಿದ ಸಾರ್ವಜನಿಕರು
ರಸ್ತೆಯನ್ನು ದುರಸ್ಥಿತಿ ಮಾಡದೇ ಎರಡು ವರ್ಷದಲ್ಲಿ 30ಕ್ಕೂ ಹೆಚ್ಚು ವಾಹನ ಸವಾರರ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಈ ರಸ್ತೆ ಸಾವಿನ ರಸ್ತೆಯಾಗಿದೆ. ಇದರಿಂದ ಬೆಸತ್ತು ಸಾರ್ವಜನಿಕರು ಸಾಮೂಹಿಕ ಧರಣಿ ನಡೆಸಿದ್ದಾರೆ. ಮಂಗಳೂರಿನ ನಂತೂರು- ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಕೊಚ್ಚಿಯಿಂದ ಪನ್ವೇಲ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಸುರತ್ಕಲ್ ಹೆದ್ದಾರಿಯನ್ನು ದುರಸ್ಥಿತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಮಂಗಳೂರಿನ ಕೂಳೂರು ಸೇತುವೆ ಬಳಿ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಗೆ ಪೊಲೀಸ್ ಇಲಾಖೆಯ ಅನುಮತಿ ನಿರಾಕರಣೆ ನಡುವೆಯೂ ಪ್ರೊಟೆಸ್ಟ್ ಮಾಡಲಾಗಿದೆ. ಇದೀಗ ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಗೆ ಸವಾಲ್ ಹಾಕಿದ್ದಾರೆ. ಪ್ರತಿಭಟನೆ ನಡೆಸದಂತೆ ಹೋರಾಟಗಾರರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿತ್ತು. ನೋಟೀಸ್ಗೆ ಲೆಕ್ಕಿಸದೇ ಸಾಮೂಹಿಕ ಧರಣಿ ನಡೆಸಿದ್ದಾರೆ.
ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು. ಅರ್ಧಕ್ಕೆ ನಿಂತಿರುವ ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು. ನಂತೂರು ಮೇಲ್ಸೇತುವೆ ಕಾಮಗಾರಿ ಕಾಲಮಿತಿಯಲ್ಲಿ ಮಾಡಿ ಮುಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೋರಾಟಗಾರರ ಒತ್ತಾಯ ಮಾಡಿದ್ದಾರೆ. ಜತೆಗೆ ಸಂಸದರು, ಶಾಸಕರು ಈ ಬಗ್ಗೆ ಧ್ವನಿಯೆತ್ತುವಂತೆ ಆಗ್ರಹ ಮಾಡಿದ್ದಾರೆ.