Published On: Fri, Nov 22nd, 2024

ಬಂಟ್ವಾಳ: ಪ್ರಸಕ್ತ ಋತುವಿನ ಪ್ರಥಮ ಕಂಬಳಕ್ಕೆ ಭಾರೀ ಸಿದ್ಧತೆ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಇಂದು ‘ಒಂದೇ ವರ್ಷದಲ್ಲಿ ಮೂರನೇ ಕಂಬಳ ವಿಶೇಷತೆ’

ಬಂಟ್ವಾಳ:ಇಲ್ಲಿನ ಎಲಿಯ ನಡುಗೋಡು ಗ್ರಾಮದ ಸಿದ್ಧಕಟ್ಟೆ ಕೊಡಂಗೆ ಎಂಬಲ್ಲಿ ಕಳೆದ ವರ್ಷ ನಿರ್ಮಾಣಗೊಂಡ ಸುಸಜ್ಜಿತ ವೀರ-ವಿಕ್ರಮ ಜೋಡುಕರೆಯಲ್ಲಿ ಪ್ರಸಕ್ತ ಋತುವಿನ ಪ್ರಥಮ ಕಂಬಳ ಇದೇ 23 ರಂದು ಶನಿವಾರ ನಡೆಯಲಿದ್ದು, ಆ ಮೂಲಕ ಒಂದೇ ವರ್ಷದಲ್ಲಿ ಮೂರನೇ ಕಂಬಳಕ್ಕೆ ವೀರ-ವಿಕ್ರಮ ಜೋಡುಕರೆ ಜಿಲ್ಲೆಯಲ್ಲಿ ಸಾಕ್ಷಿಯಾಗಲಿದೆ.


ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಈ ಕಂಬಳಕ್ಕೆ ಶನಿವಾರ ಬೆಳಿಗ್ಗೆ ಗಂಟೆ 7.30ಕ್ಕೆ ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯರ ಅಧ್ಯಕ್ಷತೆಯಲ್ಲಿ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಚಾಲನೆ ನೀಡುವರು.


ಕುಡುಂಬೂರುಗುತ್ತು ಕ್ಷೇತ್ರದ ಮೊಕ್ತೇಸರ ಗುತ್ತಿನಾರ್ ಜಯರಾಮ ಶೆಟ್ಟಿ, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ಟಿಸ್,ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಹಿರಿಯ ವೈದ್ಯರಾದ ಡಾ.ಪ್ರಭಾಚಂದ್ರ ಜೈನ್, ಡಾ.ಸುದೀಪ್ ಕುಮಾರ್ ಜೈನ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಮತ್ತಿತರ ಗಣ್ಯರು ಭಾಗವಹಿಸುವರು.


ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸುವರು.ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ.ರಾಘವೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಎಸ್ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಸ್ಥಳೀಯ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಸಹಿತ ಅವಿಭಜಿತ ಜಿಲ್ಲೆಯ ಎಲ್ಲಾ ಶಾಸಕರು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ತಿಳಿಸಿದ್ದಾರೆ.


ಒಂದೇ ವರ್ಷದಲ್ಲಿ ಮೂರು ಕಂಬಳ:
ಈ ವೀರ-ವಿಕ್ರಮ ಜೋಡುಕರೆಯಲ್ಲಿ ಒಂದು ವರ್ಷದೊಳಗೆ 3 ನೇ ಕಂಬಳ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಡೆಯುತ್ತಿದೆ. ಕಳೆದ ಮಾ.16 ರಂದು ಪ್ರಥಮ ಕಂಬಳ, ಅ.19ರಂದು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಸಬ್ ಜ್ಯೂನಿಯರ್ ವಿಭಾಗದಲ್ಲಿ ಎರಡನೇ ಕಂಬಳ, ಇದೀಗ ಶನಿವಾರ ಮತ್ತೆ ಮೂರನೇ ಕಂಬಳ ನಡೆಯುತ್ತಿದೆ. ಪ್ರಥಮ ವರ್ಷದ ಕಂಬಳದಲ್ಲಿ ಒಟ್ಟು 99 ಜೋಡಿ, ರೋಟರಿ ಕ್ಲಬ್ ಕಂಬಳದಲ್ಲಿ ಸಬ್ ಜ್ಯೂನಿಯರ್ ವಿಭಾಗದ ಒಟ್ಟು 85 ಜೋಡಿ ಕೋಣಗಳು ಭಾಗವಹಿಸಿದ್ದು, ಈ ಬಾರಿ 200 ಕ್ಕೂ ಮಿಕ್ಕಿ ಜೋಡಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಪ್ರಧಾನ ಕಾರ್ಯದಶರ್ಿ ಶಶಿಧರ ಶೆಟ್ಟಿ ತಿಳಿಸಿದ್ದಾರೆ.


ಈ ಬಾರಿ ವಾಹನ ನಿಲುಗಡೆಗೆ ಪ್ರತ್ಯೇಕ 4 ಎಕರೆ ಜಮೀನು ಮತ್ತು ಕೋಣಗಳ ವಿಶ್ರಾಂತಿಗೆ ಮೂರೂವರೆ ಎಕರೆ ಜಮೀನು ಸಮತಟ್ಟುಗೊಳಿಸಲಾಗಿದೆ. ಮಳೆಗಾಲದಲ್ಲಿ ಗುಡ್ಡದ ನೀರು ಕಂಬಳ ಕರೆಗೆ ಹರಿದು ಬಾರದಂತೆ ತಡೆಯಲು ಸುತ್ತಲೂ ಬೃಹತ್ ಗಾತ್ರದ 30 ಸಿಮೆಂಟ್ ಪೈಪ್ ಅಳವಡಿಸಲಾಗಿದೆ. ಬೇಸಿಗೆಯಲ್ಲಿ ಕೂಡಾ ಕಂಬಳ ಕರೆಗೆ ನಿರಂತರ ನೀರಿನ ಸಂಪರ್ಕ ಅಳವಡಿಸಲಾಗಿದ್ದು, ಇಲ್ಲಿ ವರ್ಷವಿಡೀ ಕುದಿ (ತರಬೇತಿ) ಕಂಬಳ ನಡೆಯುತ್ತಿದೆ. ಕಂಬಳ ಕರೆ ಸುತ್ತಲೂ ಪ್ರಕೃತಿದತ್ತ ಮರ ಗಿಡಗಳ ನೆರಳು ಓಟದ ಕೋಣಗಳಿಗೆ ಅನುಕೂಲಕರವಾಗಿದೆ.


ಚಿತ್ರನಟರ ದಂಡು:
ಈ ಬಾರಿ ಸಂಗೀತ ನಿರ್ದೇಶಕ ಗುರುಕಿರಣ್ ಸಹಿತ ಚಿತ್ರನಟರಾದ ಜಗ್ಗೇಶ್, ವಿಜಯ ರಾಘವೇಂದ್ರ, ರಾಜ್ ಬಿ.ಶೆಟ್ಟಿ, ಭೋಜರಾಜ ವಾಮಂಜೂರು, ನಿರೀಕ್ಷಾ ಶೆಟ್ಟಿ ಮತ್ತಿತರ ನಟ ನಟಿಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಮಿತಿ ಗೌರವ ಸಲಹೆಗಾರ ಕಿರಣ್ ಕುಮಾರ್ ಮಂಜಿಲ ತಿಳಿಸಿದ್ದಾರೆ.
-ಮೋಹನ್ ಕೆ.ಶ್ರೀಯಾನ್ ರಾಯಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter