ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ
ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಚುನಾವಣಾ ಅಧಿಕಾರಿಯಾಗಿದ್ದ ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ನಾಯಕ್ ರಾಯಿ ಅವರು ಪ್ರಮಾಣ ಪತ್ರ ವಿತರಿಸಿದರು.

ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಶಾಲು,ಹಾರ ಹಾಕಿ ಅಭಿನಂದಿಸಲಾಯಿತು.ಬಳಿಕ ಸಂಘದ ನೂತನ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಹಿರಿಯರ ಮಾರ್ಗದರ್ಶನ, ಸದಸ್ಯರ ಸಲಹೆಯನ್ನು ಪಡೆದುಕೊಂಡು ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರಲ್ಲದೆ
ತಾಲೂಕಿನ ಎಲ್ಲಾ ಇಲಾಖೆಗಳ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು.

ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರು ಮಾತನಾಡಿ, ಸಂಘಟನೆಯ ಮೂಲಕ ನೌಕರರಿಗೆ ಪ್ರಯೋಜನವಾಗಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ನಿಕಟಪೂರ್ವ ಅಧ್ಯಕ್ಷ ಉಮಾನಾಥ ರೈ ಮಾತನಾಡಿ, ತಾಲೂಕಿನ ಎಲ್ಲಾ ಸರಕಾರಿ ನೌಕರರ ಸಹಕಾರದಿಂದ ಕಳೆದ 12 ವರ್ಷಗಳಿಂದ ಸತತವಾಗಿ ಸಂಘದ ಅಧ್ಯಕ್ಷನಾಗಿ ಪ್ರಾಮಾಣಿಕ ಸೇವೆ ಮಾಡಿರುವ ಸಂತೃಪ್ತಿ ಹೊಂದಿದ್ದೆನೆ.
ನೂತನ ಪದಾಧಿಕಾರಿಗಳು,ಸದಸ್ಯರು ತಂಡವಾಗಿ ಕಾರ್ಯನಿರ್ವಹಿಸಿದರೆ ಬಂಟ್ವಾಳ ತಾಲೂಕು ಘಟಕ ರಾಜ್ಯಕ್ಕೆ ಮಾದರಿ ಸಂಘ ಗುರುತಿಸಲ್ಪಡಲು ಸಾಧ್ಯವಿದೆ ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳಾದ ಸಂತೋ಼ಷ್, ರಮೇಶ್ ನಾಯಕ್, ಜನಾರ್ಧನ,ಅಂಭಾಪ್ರಸಾದ್ , ಜನಾರ್ದನ ಆಚಾರ್ಯ ಕೊಯಿಲ,ರಾಜೇಂದ್ರ ರೈ,
ಜೊಯೆಲ್ ಲೊಬೋ, ಡಾ.ಅಶೋಕ್ ಕುಮಾರ್ ರೈ, ಇಂದುಶೇಖರ್,ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.
ಪದಾಧಿಕಾರಿಗಳಾದ ಸಂತೋಷ್ ಸ್ವಾಗತಿಸಿ, ಬಸಯ್ಯ ಅಲಮಟ್ಟಿ ವಂದಿಸಿದರು.ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.