Published On: Thu, Nov 14th, 2024

ಕಂದಾಯ ನಿರೀಕ್ಷಕರಿಗೆ ಬೆದರಿಕೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸರಕಾರಿ ನೌಕರರಿಂದ ಮನವಿ

ಬಂಟ್ವಾಳ: ವಿಟ್ಲ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಕರ್ತವ್ಯನಿರತರಾಗಿದ್ದ ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಅವರ ಕಚೇರಿಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಲ್ಲದೆ, ಕಚೇರಿ ಸೊತ್ತುಗಳನ್ನು ಧ್ವಂಸ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಸಂಜೆ ಬಂಟ್ವಾಳ ಆಡಳಿತ ಸೌಧದ ಮುಂಭಾಗ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು, ಮತ್ತು ನಿಯೋಜಿತ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅವರು ಈ ಘಟನೆಯ ಆರೋಪಿಗಳಾದ ಹರೀಶ್ ಕಲ್ಮಲೆ ಮತ್ತು ಧನಂಜಯ್ ಎಂಬವರ ವಿರುದ್ದ ವಿಟ್ಲ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಈ ಘಟನೆಯಿಂದ ಸರಕಾರಿ ನೌಕರರ ಮನೋಸ್ಥೈರ್ಯ ಕುಂದಿದ್ದು, ಕಚೇರಿಯಲ್ಲಿ ಕೆಲಸ ಮಾಡಲು ಭಯಪಡುವಂಥ ಪರಿಸ್ಥಿತಿ ಉಂಟಾಗಿದೆ ಕೇಸು ದಾಖಲಾದ ಆರೋಪಿಯ ಪೈಕಿ ಹರೀಶ್ ಎಂಬಾತ ಬಂಟ್ವಾಳ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಶಿರಸ್ತೇದಾರ್ ದಿವಾಕರ್ ಅವರಿಗೂ  ಅವಾಚ್ಯವಾಗಿ ನಿಂದಿಸಿದಲ್ಲದೆ ಬೆದರಿಕೆಯನ್ನು ಒಡ್ಡಿದ್ದಾನೆ ಎಂದು ಆರೋಪಿಸಿದರು.

ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರಲ್ಲದೆ ಮುಂದಿನ ದಿನಗಳಲ್ಲಿ ಸರಕಾರಿ ನೌಕರರು ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ಸಲ್ಲಿಸಲು ಅನುವು ಮಾಡಿಕೊಡುವಂತೆ ಕೋರಿದರು.

ಮನವಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಿಗೂ ರವಾನಿಸಲಾಗಿದೆ.

ಖಂಡನೆ:

ಪ್ರಕರಣಕ್ಕೆ ಸಂಬಂಧಿಸಿ ಕಂದಾಯ ಇಲಾಖೆ ನೌಕರರ ಸಂಘವೂ ಖಂಡನೆ ವ್ಯಕ್ತಪಡಿಸಿದ್ದು, ತಾಲೂಕು ಸಂಘದ ಗೌರವಾಧ್ಯಕ್ಷ ರಾಜೇಶ್ ನಾಯ್ಕ್ ಈ ಕುರಿತು ಪ್ರಕಟಣೆ ನೀಡಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. 

ಈ ಸಂದರ್ಭ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು, ನಿಯೋಜಿತ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ರಾಜ್ಯ ಪರಿಷತ್ತು ಸದಸ್ಯ ಜನಾರ್ದನ ಜೆ, ತಾಲೂಕು ಖಜಾಂಚಿ ಬಸಯ್ಯ ಆಲಮಟ್ಟಿ, ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಕೆ ಪೂಜಾರಿ, ಉಪತಹಸೀಲ್ದಾರ್ ಗಳಾದ ನವೀನ್ ಬೆಂಜನಪದವು, ನರೇಂದ್ರನಾಥ ಮಿತ್ತೂರು, ದಿವಾಕರ ಮುಗುಳ್ಯ, ಕಂದಾಯ ನಿರೀಕ್ಷಕರಾದ ವಿಜಯ್, ಪ್ರಶಾಂತ್ ಶೆಟ್ಟಿ,ಪದಾಧಿಕಾರಿಗಳಾದ ಯಮುನಪ್ಪ,ಬಸವರಾಜ್,ವೆಂಕಟೇಶ್ ,ಮುಸ್ತಾಫ,

ಸರಕಾರಿ ನೌಕರರ ಸಂಘದ ನಾನಾ ಇಲಾಖೆಯ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter