ದೀಪಿಕಾ ಪ್ರೌಢಶಾಲೆಯ ವಜ್ರ ಮಹೋತ್ಸವ ಸಂಭ್ರಮ,ಡಿ.1 ರಂದು ಕ್ರೀಡಾಕೂಟ,15,16 ವಜ್ರಮಹೋತ್ಸವ ಕಾರ್ಯಕ್ರಮ
ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಜ್ರ ಮಹೋತ್ಸವ ಸಂಭ್ರಮವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಅದರ ಭಾಗವಾಗಿ ಡಿ. 1ರಂದು ಶಾಲೆಯ ಹಿರಿಯ-ಹಾಲಿ ವಿದ್ಯಾರ್ಥಿಗಳ ಕ್ರೀಡಾಕೂಟ, ಡಿ. 14 ಮತ್ತು 15ರಂದು ವಜ್ರ ಮಹೋತ್ಸವದ ಕಾರ್ಯಕ್ರಮಗಳು ನಡೆಯಲಿದೆ ಎಂದು ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.
ಬಿ.ಸಿ.ರೋಡಿನ ಕೈಕಂಬ ಸೂರ್ಯವಂಶ ಸಭಾಂಗಣದಲ್ಲಿ ಮೊಡಂಕಾಪು ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ಧರ್ಮಗುರು ವಲೇರಿಯನ್ ಡಿ’ಸೋಜಾ ಅವರ ಉಪಸ್ಥಿತಿಯಲ್ಲಿ ಸಮಾರಂಭದ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಬಳಿಕ ಅವರು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ಸೀಮಿತ ಸಂಖ್ಯೆಯ ವಿದ್ಯಾಸಂಸ್ಥೆಗಳಿದ್ದ ಸಂದರ್ಭದಲ್ಲಿ ಚರ್ಚ್‌ನ ಆಗಿನ ಧರ್ಮಗುರು ರೆ|ಫಾ। ಇ.ಎ. ಕ್ಯಾಸ್ತಲಿನೊ, ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಯಮಿ ವಿಕ್ಟರ್ ರಂ, ಗುಂಡಿಲ ಮಂಜಪ್ಪ ಶೆಟ್ಟಿ ಮೊದಲಾದವರು ಸೇರಿ ವಿದ್ಯಾಭಿವೃದ್ಧಿ ಸಮಿತಿಯನ್ನು ಅಸ್ತಿತ್ವಕ್ಕೆ ತಂದು 1964 ರ ಜೂ.15ರಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದರು.ಮುಂದೆ ಸಂಸ್ಥೆಯು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನವನ್ನು ತಂದುಕೊಟ್ಟಿದೆ.
ಕಳೆದ 60 ವರ್ಷಗಳಲ್ಲಿ ಶಾಲೆಯಿಂದ 6 ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ಉನ್ನತ ಸ್ಥಾನದಲ್ಲಿದ್ದು, ಈಗಾಗಲೇ ಒಂದು ಸಾವಿರದಷ್ಟು ಮಂದಿಯನ್ನು ಸಂಪರ್ಕಿಸಿ ವಜ್ರಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ವಿನಂತಿಸಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಜತೆಗೆ ಅವರಿಗೆ ಸಮವಸ್ತ್ರ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಣೆಯ ಜತೆಗೆ ಮೂಲ ಸೌಕರ್ಯವೃದ್ಧಿಯ ದೃಷ್ಟಿಯಿಂದ ನಿಧಿಯೊಂದನ್ನು ಸ್ಥಾಪಿಸಿ ಶಾಲೆಗೆ ಅರ್ಪಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಈಗಾಗಲೇ ಮಹೋತ್ಸವ ಸಮಿತಿಯನ್ನು ರಚಿಸಿದ್ದು,ಕಾರ್ಯಕ್ರಮಗಳ ಯಶಸ್ವಿಗಾಗಿ ವಿವಿಧ ಉಪಸಮಿತಿಯನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಿ ವಜ್ರ ಮಹೋತ್ಸವದ ಯೋಜನೆಗಳನ್ನು ರೂಪಿಸಿಕೊಳ್ಳಲಾಗುವುದು ಎಂದರು.
ಆಡಳಿತ ಮಂಡಳಿ ಸದಸ್ಯರಾದ ಮಹಮ್ಮದ್ ವಳವೂರುಶಾಲಾ, ಮುಖ್ಯಶಿಕ್ಷಕ ಸಾಧು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ರೋಶನ್ ಡಿ’ಸೋಜಾ, ಕೋಶಾಧಿಕಾರಿ ಜೋನ್ ಬ್ಯಾಪ್ಟಿಸ್ಟ್ ಗೋಮ್ಸ್ ಪದಾಧಿಕಾರಿಗಳಾದ ಸತೀಶ್ ಭಂಡಾರಿ, ರಾಮಕೃಷ್ಣ ಆಳ್ವ, ರೋಶನ್ ಡಿ’ಸೋಜಾ, ಸದಾಶಿವ ಡಿ.ತುಂಬೆ, ದಿವಾಕರ ಶೆಟ್ಟಿ ಪರಾರಿಗುತ್ತು, ಡಾ| ಗೋವರ್ಧನ್ ರಾವ್, ಶಿವಪ್ರಸಾದ್ ಪ್ರಭು,ಸದಾಶಿವ ಬಂಗೇರ,ವಿದ್ಯಾರ್ಥಿ ನಾಯಕಆಯಾಜ್ ,ತಿಪ್ಪೆಸ್ವಾಮಿ,ಸತೀಶ್ ಪಲ್ಲಮಜಲು ಮೊದಲಾದವರಿದ್ದರು.