ಬಂಟ್ವಾಳ: ಪಾಲ್ತಾಜೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ತುಡರ್ ಗ್ರಾಮ ಸಮಿತಿ; “ಸಾಮರಸ್ಯದ ತುಡರ್ ” ಸಂಭ್ರಮ
ಸಾಲೆತ್ತೂರು ಗ್ರಾಮದ ಪಾಲ್ತಾಜೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ತುಡರ್ ಗ್ರಾಮ ಸಮಿತಿ ವತಿಯಿಂದ “ಸಾಮರಸ್ಯದ ತುಡರ್ ” ಕಾರ್ಯಕ್ರಮವನ್ನು ಗುರುವಾರ ರಾತ್ರಿ ಆಚರಿಸಲಾಯಿತು. ಗೋ ಸೇವಾ ಗತಿವಿದಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ಪ್ರವೀಣ್ ಸರಳಾಯರವರು ಮಾತಾನಾಡಿ, ‘ತುಡಾರ್ ಅಂದರೆ ನಂದಾ ದೀಪ. ಈ ದೀಪಗಳ ಹಬ್ಬವನ್ನು ಸನಾತನ ಹಿಂದೂ ಧರ್ಮದಲ್ಲಿ ದೀಪಾವಳಿ ಎಂದು ಆಚರಿಸುತ್ತೇವೆ. ದೀಪ ಉರಿಸುವ ಮೂಲಕ ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ಹೆಚ್ಚಿಸುತ್ತದೆ. ಅಸ್ಪೃಶ್ಯತೆ, ಅಸಮಾನತೆ, ಮೇಲು ಕೀಳು, ತಾರತಮ್ಯ ಎಂಬ ಮಾನಸಿಕತೆಯನ್ನು ತೊರೆದು ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು ನಾವೆಲ್ಲರೂ ಬಂಧುಗಳು ಎನ್ನುವ ವಿಚಾರವನ್ನು ಕೃತಿ ರೂಪಕ್ಕೆ ಇಳಿಸುವುದೇ ತುಡಾರ್ ಕಾರ್ಯಕ್ರಮದ ಉದ್ದೇಶ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉದ್ಯಮಿ ಮಾಧವ ಮಾವೆ, ಸಾಮಾಜಿಕ ಮುಖಂಡರಾದ ದೇವಿದಾಸ್ ಶೆಟ್ಟಿ ಪಾಲ್ತಾಜೆ, ಸೇವಾ ಕುಟುಂಬ ಹಿರಿಯರಾದ ಶಿವಯ್ಯ, ಪಾಲ್ತಾಜೆ ಶ್ರೀ ಮಹಮ್ಮಾಯಿ ಕ್ಷೇತ್ರದ ಪಾತ್ರಿಗಳಾದ ಪೂವಪ್ಪ, ಸಾಮರಸ್ಯ ಗತಿವಿಧಿಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಹ ಸಂಯೋಜಕರಾದ ಭರತ್ ಮಂಜನಾಡಿ, ವಿಟ್ಲ ತಾಲೂಕು ಗ್ರಾಮ ವಿಕಾಸ ಸಂಯೋಜಕರಾದ ರಮೇಶ್ ಧರ್ಮನಗರ, ವಿಟ್ಲ ತಾಲೂಕು ಉದ್ಯೋಗಿ ಕಾರ್ಯ ಪ್ರಮುಖರಾದ ಗಣೇಶ್ ಕಾರಾಜೆ, ಪಂಚಾಯತ್ ಸದಸ್ಯರಾದ ಆನಂದ ಪೂಜಾರಿ ಮಾವೆ, ಪ್ರಶಾಂತ್ ಶೆಟ್ಟಿ ಅಗರಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳನ್ನು ವಿಶ್ವನಾಥ ಪೂಜಾರಿ ಕಟ್ಟತ್ತಿಲ ಸ್ವಾಗತಿಸಿ, ವಿದ್ಯೇಶ್ ರೈ ಕಿಲ್ಲಂಬಲೆ ಪಡ್ಪು ವಂದಿಸಿದರು. ಈ ಕಾರ್ಯಕ್ರಮಕ್ಕೂ ಮುನ್ನ ಸಾಲೆತ್ತೂರು ಶ್ರೀ ಸದಾಶಿವ ದೇವಸ್ಥಾನದಿಂದ ದೀಪವನ್ನು ಬೆಳಗಿ ಶ್ರೀ ಮಹಮ್ಮಾಯಿ ಕ್ಷೇತ್ರಕ್ಕೆ ತಂದು ಹಣತೆಗಳನ್ನು ಹಚ್ಚಿ ಬೆಳಗಲಾಯಿತು.