ಮಂಗಳೂರಿನಲ್ಲಿ ಸಂಚಾರಿ ಹೈಕೋಟ್೯ ಪೀಠದ ಸ್ಥಾಪನೆ: ಜನಾಂದೋಲನ ಸೃಷ್ಠಿಸಿ; ಐವಾನ್
ಬಂಟ್ವಾಳ: ಕರಾವಳಿ ಜಿಲ್ಲೆಯ ಮಂಗಳೂರಿನಲ್ಲಿ ಸಂಚಾರಿ ಹೈಕೋಟ್೯ ಪೀಠದ ಸ್ಥಾಪನೆಯ ಹೋರಾಟದ ಕಿಚ್ಚು ಮತ್ತೆ ಎದ್ದಿದ್ದು,ಈ ನಿಟ್ಟಿನಲ್ಲಿ ದ.ಕ.ಜಿಲ್ಲೆಯ ಎಲ್ಲಾ ತಾಲೂಕಿನ ವಕೀಲರ ಸಂಘಗಳ ಪದಾಧಿಕಾರಿಗಳ ಸಮಾಲೋಚನಾ ಸಭೆ ಸೋಮವಾರ ಸಂಜೆ ಬಂಟ್ವಾಳ ವಕೀಲರ ಸಂಘದ ಆಶ್ರಯದಲ್ಲಿ ನಡೆಯಿತು.
ಹೋರಾಟ ಸಮಿತಿಯ ಪ್ರಧಾನಸಂಚಾಲಕ, ಎಂಎಲ್ ಸಿ ಐವಾನ್ ಡಿಸೋಜ ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿ,ಸರಕಾರ ಮನಸ್ಸು ಮಾಡಿ ಬಜೆಟ್ ನಲ್ಲಿ ಅನುದಾನ ಕಾದಿರಿಸಿ ಒಂದು ಸಾಲಿನ ಷರಾ ಬರೆದರೆ ಪೀಠ ಸ್ಥಾಪನೆಯ ವಿಚಾರದಲ್ಲಿ ಸುಪ್ರೀಂ ಕೋಟ್೯ ಕೂಡ ಮಾತನಾಡುವಂತಿಲ್ಲ,ಈ ದೆಸೆಯಲ್ಲಿ
ಜನಾಂದೋಲನವನ್ನು ಸೃಷ್ಠಿಸುವ ಅಗತ್ತವಿದೆ ಎಂದರು.
ಗುಲ್ಬರ್ಗ,ದಾರವಾಡ ಜಿಲ್ಲೆಯಲ್ಲು ಹೋರಾಟದ ಫಲವಾಗಿಯೇ ಪೀಠ ಸ್ಥಾಪನೆಯಾಗಿದ್ದು, ಈಗಾಗಲೇ ಕಾನೂನು ಸಚಿವರೊಂದಿಗೂ ಸಮಾಲೋಚನೆ ನಡೆಸಿದ್ದು,ಅವರು ಕೂಡ ಸಕರಾತ್ಮವಾಗಿ ಸ್ಪಂದಿಸಿದ್ದಾರೆ ಎಂದ ಅವರು ಸಕಲ ಸೌಲಭ್ಯವನ್ನು ಹೊಂದಿರುವ ದ.ಕ.ಜಿಲ್ಲೆಯ ಮಂಗಳೂರೇ ಸಂಚಾರಿ ಹೈಕೋಟ್ ೯ ಪೀಠದ ಸ್ಥಾಪನೆಗೆ ಸೂಕ್ತ ಸ್ಥಳ ಎಂದರು.
ಮುಂದಿನ ದಿನಗಳಲ್ಲಿ ಹೋರಾಟದ ಕಿಚ್ಚನ್ನು ತೀವ್ರಗೊಳಿಸುವ ಅಗತ್ಯವಿದ್ದು,ಜಿಲ್ಲಾ ಮಟ್ಟದಲ್ಲಿ ಹೋರಾಟ ಸಮಿತಿಯ ಕೇಂದ್ರ ಕಚೇರಿ ತೆರೆದು,ಸಮಿತಿ ರಚಿಸುವ ಮೂಲಕ ಜವಾಬ್ದಾರಿಯನ್ನು ಹಂಚಬೇಕು,ಜಿಲ್ಲೆಯ ಎಲ್ಲಾಸಂಘಸಂಸ್ಥೆ,ಸಂಘಟನೆ,ಕಾನೂನು ಕಾಲೇಜ್, ,ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರವನ್ನು ಪಡೆದು ತಾಲೂಕು ಮಟ್ಟದಲ್ಲಿ ಸಹಿತ ಜಿಲ್ಲಾ ಬಂದ್ ,ಹಿರಿಯ ವಕೀಲರ ನೇತೃತ್ವದಲ್ಲಿ ಮುಲ್ಕಿಯಿಂದ ಸುಳ್ಯದವರೆಗೆ ಪಾದಯಾತ್ರೆ,ರಾಜ್ಯಪಾಲರು,ಸರಕಾರಕ್ಕೆ ಮನವಿಸಲ್ಲಿಕೆ ಹೀಗೆ ನಾನಾರೀತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಸರಕಾರದ ಗಮನಸೆಳೆಯಬೇಕಾಗಿದೆ ಎಂದರು.
ಡಿಸೆಂಬರ್ ನಲ್ಲಿ ಸಭೆ:
ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಬೆಳಗಾಂ ನಲ್ಲಿ ವಿಧಾನಸಭಾ ಅಧಿವೇಶನ ನಡೆಯಲಿದ್ದು,ಈ ಸಂದರ್ಭ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ 7 ಜಿಲ್ಲೆಯ ಶಾಸಕರು,ಉಸ್ತುವಾರಿ ಸಚಿವರು, ಸಚಿವರು,ಮುಖ್ಯಮಂತ್ರಿಗಳು, ಕಾನೂನು ಸಚಿವರನ್ನೊಳಗೊಂಡು ಸಭೆ ಆಯೋಜಿಸಿ ಈ ಕುರಿತು ಸಮಗ್ರ ಚರ್ಚೆ ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿದ ಐವಾನ್ ಅದಕ್ಕೆ ಮೊದಲು ಹೋರಾಟ ಸಮಿತಿ ಏಳು ಜಿಲ್ಲೆಗೂ ಪ್ರವಾಸ ಕೈಗೊಂಡು ಜನಾಭಿಪ್ರಾಯ ಸಂಗ್ರಹಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಬಂಟ್ವಾಳದಲ್ಲಿ 29 ಕೋ.ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ನ್ಯಾಯಾಲಯದ ಕಟ್ಟಡಕ್ಕೆ ಮುಂದಿನ ಸಂಪುಟ ಸಭೆಯಲ್ಲಿ ಅನುದಾನಕ್ಕೆ ಅನುಮೋದನೆ ಪಡೆಯಲು ಪ್ರಯತ್ನಿಸುವುದಾಗಿಯು ಅವರು ಭರವಸೆ ನೀಡಿದರು.
ಭಗಿರಥ ಪ್ರಯತ್ನ ಅಗತ್ಯವಿದೆ:
ಮಾಜಿ ಎಂಎಲ್ ಸಿ,ಹಿರಿಯ ವಕೀಲರಾದ ಮೋನಪ್ಪ ಭಂಡಾರಿ ಅವರು ಮಾತನಾಡಿ,ಜಿಲ್ಲೆಯಲ್ಲಿ ಸಂಚಾರಿ ಹೈಕೋಟ್೯ ಪೀಠ ಸ್ಥಾಪನೆಯಾಗಬೇಕೆಂಬ ಕೂಗು ಹಿಂದಿನಿಂದಲು ಇತ್ತು.ಆದರೆ ಪರಿಣಾಮಕಾರಿಯಾಗಿ ಹೋರಾಟಗಳು ನಡೆದಿರಲಿಲ್ಲ,ಇದೀಗ ಕಾಲು ಮತ್ತೆ ಕೂಡಿ ಬಂದಿದ್ದು,ಈ ನಿಟ್ಟಿನಲ್ಲಿ ಹೋರಾಟದ
ರೂಪುರೇಷೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಬೇಕಾಗಿದೆ ಎಂದರು.
ಎಲ್ಲಾ 7 ಜಿಲ್ಲೆಗಳಿಗೂ ಮಂಗಳೂರು ಕೇಂದ್ರ ಸ್ಥಾನವಾಗಿದ್ದು, ಸಾರಿಗೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ, ಕಟ್ಟಡಗಳ ಲಭ್ಯತೆಗೂ ಕೊರತೆಯಿಲ್ಲ, ಮುಂದಿನ ಪೀಳಿಗೆಗಾದರೂ ಸಂಚಾರಿ ಹೈಕೋಟ್೯ಪೀಠದ ಸ್ಥಾಪನೆ ಶತಸಿದ್ದ, ಈ ನಿಟ್ಟಿನಲ್ಲಿ ಭಗಿರಥ ಪ್ರಯತ್ನದ ಅಗತ್ಯವಿದೆ ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ
ಎಚ್ .ವಿ.ರಾಘವೇಂದ್ರ ಪ್ರಸ್ತಾವನೆಗೈದು, ಮಂಗಳೂರಿನಲ್ಲಿ ಸಂಚಾರಿ ಹೈಕೋಟ್೯ ಪೀಠ ಸ್ಥಾಪನೆಯಾಗಬೇಕೆಂದು 1981 ರಿಂದಲೇ ಹೋರಾಟ ನಡೆಯುತ್ತಿದೆ.ಈ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ಕೂಡ ನಡೆಸಲಾಗಿದೆ, ಇದೀಗ ಪೀಠ ಸ್ಥಾಪನೆಯ ಕುರಿತ ಪ್ರಸ್ತಾಪಕ್ಕೆ ಕಾವು ದೊರಕಿದೆ ಎಂದರು.
ಡಿ.13,14,15 ರಂದು ವಕೀಲರ ಸಂಘದ ವತಿಯಿಂದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದ್ದು,ಈ ಸಂದರ್ಭದಲ್ಲು ಪೀಠ ಸ್ಥಾಪನೆಗೆ ಒತ್ತಾಯಿಸಿ ಅಂಚೆ ಚಳುವಳಿ,ಸಹಿ ಸಂಗ್ರಹ ಅಭಿಯಾನ,ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು ಎಂದರು.
ಮಂಗಳೂರಿನ ವಕೀಲರಾದ ಎಂ.ಪಿ.ನೊರೋನ್ಹ ಅವರು ಹೋರಾಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು,
ಮಂಗಳೂರು ವಕೀಲರ ಸಂಘದ ಮಾಜಿಅಧ್ಯಕ್ಷರಾದ ಅಶೋಕ್ ಅರಿಗ, ಕೆ.ಪ್ರಥ್ವಿರಾಜ್ ರೈ,ವಕೀಲೆ ಸುಮನಾ ಶರಣ್,
ಬಂಟ್ವಾಳದ ಹಿರಿಯ ವಕೀಲರಾದ ಈಶ್ವರ ಉಪದ್ಯಾಯ,ಅಶ್ವನಿಕುಮಾರ್ ರೈ,ಪ್ರಸಾದ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ತಾಲೂಕು ವಕೀರಸಂಘದ
ವಕೀಲರುಗಳಾದ ಸುಕುಮಾರ್ ಸುಳ್ಯ,ವಸಂತ ಬೆಳ್ತಂಗಡಿ,ಹರೀಶ್ ಮೂಡಬಿದ್ರೆ ,ಚಿನ್ಮಯಿ ಪುತ್ತೂರು ಅವರು ಸಲಹೆಗಳನ್ನಿತ್ತರು.
ಇದೇ ವೇಳೆ ಬಂಟ್ವಾಳ ವಕೀಲರ ಸಂಘದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಇದೇ ಮೊದಲಿಗೆ ಅಗಮಿಸಿದ ಎಂಎಲ್ ಸಿ ಐವಾನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘ ಹಾಗೂ ನ್ಯಾಯಾಲಯದ ಕಟ್ಟಡಕ್ಕೆ ಅನುದಾನ ಕೋರಿ ಅವರಿಗೆ ಸಂಘದಿಂದ ಎರಡು ಪ್ರತ್ಯೇಕ ಮನವಿ ಸಲ್ಲಿಸಲಾಯಿತು.
ಅದೇರೀತಿ ತೆಂಗಿನ ಸಸಿಯನ್ನು ನಾಟಿ ಮಾಡಲಾಯಿತು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚಾಡ್೯ ಎಂ.ಕೋಸ್ತಾ ಸ್ವಾಗತಿಸಿದರು.ವಕೀಲರಾದ ವೀರೇಂದ್ರ ಸಿದ್ದಕಟ್ಟೆ ಸನ್ಮಾನಪತ್ರ ವಾಚಿಸಿದರು.
ಬಿ.ವೆಂಕಟ್ರಮಣ ಶೆಣೈ ವಂದಿಸಿದರು. ರವೀಂದ್ರಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.