ಮೂಡುಬಿದಿರೆ: ಕೊನೆಗೂ ಬೋನಿಗೆ ಬಿದ್ದ ಚಿರತೆ, ನಿಟ್ಟಿಸಿರು ಬಿಟ್ಟ ಸ್ಥಳೀಯರು
ಮೂಡುಬಿದಿರೆಯ ಕಲ್ಲಮುಂಡ್ಕೂರು ಸುತ್ತಮುತ್ತ ಪ್ರದೇಶದಲ್ಲಿ ಹಲವು ದಿನಗಳಿಂದ ಚಿರತೆಯೊಂದು ಓಡಾಡುತ್ತಿತ್ತು. ಇದರಿಂದ ಅಲ್ಲಿ ಜನ ಭಯಭೀತರಾಗಿದ್ದರು. ಇದೀಗ ಆ ಚಿರತೆ ಬೋನಿಗೆ ಬಿದ್ದಿದೆ. ಇನ್ನು ಚಿರತೆ ಓಡಾಟದ ಬಗ್ಗೆ ಪಂಚಾಯತ್ ಸದಸ್ಯ ವಸಂತ್ ಸೇರಿದಂತೆ ಗ್ರಾಮದ ನಿವಾಸಿಗಳು ಮೂಡುಬಿದಿರೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತಿಳಿದು ಅಧಿಕಾರಿಗಳು ಚಿರತೆ ಪತ್ತೆ ಕಾರ್ಯಚರಣೆ ನಡೆಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಪಿ ಶ್ರೀಧರ್ ಮತ್ತು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ ಅವರ ನೇತೃತ್ವದಲ್ಲಿ ಈ ಕಾರ್ಯಚರಣೆಯನ್ನು ನಡೆಸಲಾಗಿತ್ತು. ಚಿರತೆಗಾಗಿ ಕಬ್ಬಿಣದ ಪಂಜರವನ್ನು ಕೂಡ ಸಿದ್ಧ ಮಾಡಿದರು. ಇದೀಗ ನೆನ್ನೆ (ಅ.1) ಚಿರತೆ ಬೋನಿಗೆ ಬಿದ್ದಿದೆ.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಮೂಡುಬಿದಿರೆ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಗಾಣಿಗ, ಅರಣ್ಯ ಸಿಬ್ಬಂದಿ ರಾಜೇಶ್ ಹಾಗೂ ಇತರ ಅಧಿಕಾರಿಗಳು ಬೋನಿನಲ್ಲಿದ್ದ ಚಿರತೆಯನ್ನು ಸಾಗಿಸಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಹೇಳಿದ್ದಾರೆ