ಮೊಡಂಕಾಪು: ದೀಪಿಕಾ ಪ್ರೌಢಶಾಲೆಗೆ 60 ಸಂಭ್ರಮ; ಸಂಭ್ರಮಾಚರಣೆಗೆ ವಿವಿಧ ಸಮಿತಿ ರಚನೆ
ಬಂಟ್ವಾಳ:ಕಳೆದ 1964ರಲ್ಲಿ ಮೊಡಂಕಾಪು ವಿದ್ಯಾಭಿವೃದ್ಧಿ ಸಮಿತಿ ವತಿಯಿಂದ ಸ್ಥಾಪನೆಗೊಂಡ ಮೊಡಂಕಾಪು ದೀಪಿಕಾ ಪ್ರೌಢಶಾಲೆ 60ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಡಿ.12ರಂದು ದಿನವಿಡೀ ಸಂಭ್ರಮಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸಂಚಾಲಕ ಧರ್ಮಗುರು ವಲೇರಿಯನ್ ಡಿಸೋಜ ಹೇಳಿದರು.
ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ವಿದ್ಯಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. 60 ನೇ ವರ್ಷಚರಣೆಯ ಯಶಸ್ವಿಗಾಗಿ ಪ್ರಧಾನ ಸಮಿತಿ ಮತ್ತು ವಿವಿಧ ಉಪ ಸಮಿತಿ ರಚಿಸಿ ಅವರಿಗೆ ಜವಾಬ್ದಾರಿ ಹಂಚಿಕೆ ನಡೆಸಲಾಯಿತು.
ಟ್ರಸ್ಟಿ, ನ್ಯಾಯವಾದಿ ಅಶ್ವನಿ ಕುಮಾರ್ ರೈ ಮಾತನಾಡಿ, ಕಳೆದ 60 ವರ್ಷಗಳಲ್ಲಿ ಈ ಶಾಲೆಯಲ್ಲಿ ಕಲಿತು ವಿವಿಧೆಡೆ ಉದ್ಯೋಗದಲ್ಲಿರುವ ಹಿರಿಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅಂದು ಕಡ್ಡಾಯವಾಗಿ ಭಾಗವಹಿಸಲು ವಿನಂತಿಸಲಾಗಿದೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ ಸಾಲಿಯಾನ್ ಮಾತನಾಡಿ, ಈಗಾಗಲೇ ಕೆಲವೊಂದು ದಾನಿಗಳ ನೆರವಿನಲ್ಲಿ ಶಾಲೆಗೆ ಸುಣ್ಣ-ಬಣ್ಣ ಸಹಿತ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಇನ್ಫೆಂಟ್ ಕನ್ನಡ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ತೆರೆಸಾ ಡಿಮೆಲ್ಲೊ, ಪ್ರಮುಖರಾದ ಮಹಮ್ಮದ್ ವಳವೂರು, ಸುನಿಲ್ ವೇಗಸ್, ಬಿ.ಸತೀಶ ಭಂಡಾರಿ, ಸದಾಶಿವ ಬಂಗೇರ, ಕೆ.ಎಚ್.ಅಬೂಬಕ್ಕರ್ ಮತ್ತಿತರರು ಸಲಹೆ ನೀಡಿದರು.
ಮುಖ್ಯಶಿಕ್ಷಕ ಸಾಧು ಮೂಡುಬಿದ್ರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ತಿಪ್ಪೇಸ್ವಾಮಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.