ಬಿ.ಸಿ.ರೋಡಿನಲ್ಲಿ ಬ್ರಹ್ಮ ಶ್ರೀನಾರಾಯಣ ಗುರು ಹೆಸರಿನಲ್ಲಿ ವೃತ್ತ ನಿರ್ಮಾಣ ಪೂರ್ವಭಾವಿ ಸಭೆ
ಬಂಟ್ವಾಳ: ತಾಲೂಕು ಕೇಂದ್ರವಾದ ಬಿ.ಸಿ.ರೋಡಿನ ಪ್ರಮುಖಭಾಗದಲ್ಲಿ ಬ್ರಹ್ಮ ಶ್ರೀನಾರಾಯಣ ಗುರು ಅವರ ಹೆಸರಿನಲ್ಲಿ ವೃತ್ತವನ್ನು ಮಾದರಿಯಾಗಿ ಪುನರ್ ನಿರ್ಮಿಸುವ ನಿಟ್ಟಿನಲ್ಲಿ ಸೋಮವಾರ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸ್ಥಳೀಯ ಬಿಲ್ಲವ ಮುಖಂಡರು, ಜನಪ್ರತಿನಿಧಿಗಳು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಯತು.

ಬಿ.ಸಿ.ರೋಡು- ಅಡ್ಡ ಹೊಳೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಯ ಹಿನ್ನಲೆಯಲ್ಲಿ ಬಿ.ಸಿ.ರೋಡಿನಲ್ಲಿದ್ದ ನಾರಾಯಣಗುರು ವೃತ್ತವನ್ನು ತೆರವುಗೊಳಿಸಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಹೆದ್ದಾರಿ ಇಲಾಖೆ ವೃತ್ತ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದ್ದು, ವೃತ್ತವನ್ನು ಯಾವರೀತಿ ಹಾಗೂ ಹೊಸಸ್ಪರ್ಶದೊಂದಿಗೆ ರಾಜ್ಯಕ್ಕೆ ಮಾದರಿಯಾಗಿ ಮತ್ತು ನಾರಾಯಣಗುರುಗಳ ತತ್ವ, ಸಂದೇಶ ಸಾರುವ ರೀತಿಯಲ್ಲಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯೋಜನೆಗೆ ಪೂರಕವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಈ ಸಂದರ್ಭದಲ್ಲಿ ಮಾತನಾಡಿ,ಜಿಲ್ಲೆಯ ಸಂಸ್ಕೃತಿಯನ್ನು ಅರಿತಿರುವ ಆರ್ಕಿಟೆಕ್ ರಿಂದ ಡಿಸೈನ್ ತಯಾರಿಸಿ, ಬಳಿಕ ಅಧಿಕಾರಿಗಳು,ಪ್ರಮುಖರು ಚರ್ಚೆಸಿ ಅಂತಿಮಗೊಳಿಸುವಂತೆ ಅವರು ಸಲಹೆ ನೀಡಿದರು.ಈ ಸಂಬಂಧ ಬಿಲ್ಲವ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಪ್ರಮುಖರ ಸೇರಿನಾಲ್ಕೈದು ಮಂದಿಯನ್ನೊಳಗೊಂಡ ಸಮಿತಿ ರಚಿಸುವಂತೆ ಸೂಚಿಸಿದ ಸಂಸದರು ಯಾವುದೇ ಸಲಹೆ,ಸೂಚನೆಗಳಿದ್ದರೆ ಈ ಸಮಿತಿಗೆ ನೀಡುವಂತೆ ತಿಳಿಸಿದರು.
ವೃತ್ತ ನಿರ್ಮಾಣದ ಬಳಿಕಅದರ ನಿರ್ವಹಣೆಯ ಬಗ್ಗೆಯು ಗಮನದಲ್ಲಿರಿಸಿಕೊಂಡು ಮುಂದಿನ ಹತ್ತು,ಹದಿನೈದು ದಿನದ ಒಳಗಾಗಿ ವೃತ್ತದ ಸುಂದರವಾದ ನಕ್ಷೆ ತಯಾರಿಸಿ ಬಳಿಕ ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮಗೊಳಿಸುವಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ,ರಾಜ್ಯದಲ್ಲಿಯೇ ರಾ.ಹೆ.ಸುಮಾರು 63 ಕಿ.ಮೀ. ಉದ್ದ ಕಾಂಕ್ರೆಟ್ ರಸ್ತೆ ನಿರ್ಮಾಣವಾಗುತ್ತಿರುವ ಈ ಹಂತದಲ್ಲಿ ಮಂಗಳೂರು- ಬೆಂಗಳೂರಿಗೆ ಕೊಂಡಿಯಾಗಿರುವ ಬಿ.ಸಿ.ರೋಡಿನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಸುಂದರವಾದ, ಎಲ್ಲರ ಗಮನಸೆಳೆಯುವ ರೀತಿಯಲ್ಲಿ ವೃತ್ತದ ನಿರ್ಮಾಣವಾಗಬೇಕಾಗಿದೆ ಎಂದು ತಿಳಿಸಿದರು.
ಮುಂದಿನ ಮಾಚ್೯ ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳುವ ನಿರೀಕ್ಷೆ ಇದ್ದು,ಕಾಮಗಾರಿ ಕೂಡ ಪ್ರಗತಿಯಲ್ಲಿದ್ದು, ಡಿಸೆಂಬರ್ ನೊಳಗಾಗಿ ವೃತ್ತ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸುವ ದೆಸೆಯಲ್ಲಿ ಪ್ರಯತ್ನಿಸುವಂತೆ ಶಾಸಕರುತಿಳಿಸಿದರು.ವೃತ್ತ ನಿರ್ಮಾಣದ ಜೊತೆ,ಜೊತೆಗೆ ಸಾರ್ವಜನಿಕರ ಅನುಕೂಲವಾಗುವ ದೆಸೆಯಲ್ಲಿ ಬಿ.ಸಿ.ರೋಡಿನ ಪ್ಲೈ ಓವರ್ ನ ಮೇಲೆ ವಿದ್ಯುತ್ ದೀಪಗಳನ್ನು ಅಳವಡಿಸಲು ಸಂಸದರು ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಬೂಡದ ಮಾಜಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಅವರು ಮನವಿ ಮಾಡಿದರು.
ಉದ್ಯಮಿ ಪ್ರಕಾಶ್ ಅಂಚನ್ ,ತಿಮ್ಮಪ್ಪ ಪೂಜಾರಿ,ಮಾಜಿ ಶಾಸಕ ರುಕ್ಮಯ ಪೂಜಾರಿ,ಬೂಡಾ ಅಧ್ಯಕ್ಷ ಬೇಬಿಕುಂದರ್,ರಾಜೇಶ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ,ಕೆಎನ್ ಆರ್ ಸಂಸ್ಥೆಯ ಪ್ರೊಜೆಕ್ಟ್ ಮೆನೇಜರ್ ಗಳಾದ ಮಹೇಂದ್ರಕುಮಾರ್ ಸಿಂಗ್ ,ರಘನಾಥ ರೆಡ್ಡಿ ವೃತ್ತ ನಿರ್ಮಾಣದ ಕುರಿತು ಮಾಹಿತಿ ನೀಡಿದರು.
ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಬಿಲ್ಲವ ಸಮಾಜ ಸೇವಾ ಸಂಘದ ತಾಲೂಕು ಅದ್ಯಕ್ಷ ಸಂಜೀವ ಪೂಜಾರಿ,ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಉಪಸ್ಥಿತರಿದ್ದರು.
ಕಿಯೋನಿಕ್ಸ್ ನಿಗಮದ ಮಾಜಿಅಧ್ಯಕ್ಷಹರಿಕೃಷ್ಣ ಬಂಟ್ವಾಳ ಪ್ರಸ್ತಾವನೆಗೈದು ವೃತ್ತದಲ್ಲಿ ನಾರಾಯಣಗುರುಗಳ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲ ಆದರೆ ಅವರ ತತ್ವ,ಆದರ್ಶಗಳನ್ನು ಸಾರುವ ಸಂದೇಶ ಬಿತ್ತರಿಸುವ ಕೆಲಸ ಇಲ್ಲಿ ಆಗಬೇಕು ಎಂದರು.ಬಂಟ್ವಾಳ ಯುವವಾಹಿನಿಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಸ್ವಾಗತಿಸಿದರು.