ಮಂಗಳೂರು: ಹಸುವಿಗೆ ರೇಬಿಸ್ ಶಂಕೆ; ಹುಚ್ಚೆದ್ದು ದಾಂಧಲೆ ನಡೆಸಿದ್ದ ಹಸು
ಹಸುವೊಂದು ಏಕಾಏಕಿ ಹುಚ್ಚೆದ್ದು ಹಲವರ ಮೇಲೆ ದಾಳಿ ನಡೆಸಿದ ಘಟನೆಯು ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಸೋಮೇಶ್ವರ ಬಳಿ ನಡೆದಿದೆ. ಮನೆಯೊಂದರ ಆವರಣಕ್ಕೆ ನುಗ್ಗಿ ಭಾರೀ ಗಾತ್ರದ ಹಸುವೊಂದು ದಾಂಧಲೆ ನಡೆಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಟರ್, ಮಹಿಳೆ ಸೇರಿದಂತೆ ಅನೇಕರಿಗೆ ದಾಳಿ ಮಾಡಿದೆ.
ಸೋಮೇಶ್ವರ ದ್ವಾರದ ಬಳಿಯ ನಿವಾಸಿಯೋರ್ವರಿಗೆ ಸೇರಿದ ಹಸುವಾಗಿದ್ದು, ಸ್ಥಳೀಯರು ಹರಸಾಹಸ ಪಟ್ಟು ಹಸುವನ್ನು ಹಿಡಿದಿದ್ದು, ಪಶು ವೈದ್ಯರು ಅರಿವಳಿಕೆ ನೀಡಿದ್ದು ಕೆಲವೇ ಹೊತ್ತಿನಲ್ಲಿ ಹಸು ಸಾವನ್ನಪ್ಪಿದೆ.
ಈ ಹಸು ರೇಬೀಸ್ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಹುಚ್ಚು ನಾಯಿಯ ಕಡಿತದಿಂದ ರೇಬಿಸ್ ಆವರಿಸಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಧೃಢೀಕರಿಸಲು ದನದ ಮೆದುಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.