ದ.ಕ. ಅಭಿವೃದ್ಧಿಯ ಪರಿಕಲ್ಪನೆ ಸಾಮಾಜಿಕ ಚಟುವಟಿಕೆಗಳ ಪ್ರವಾಸೋದ್ಯಮಕ್ಕೆ ಒತ್ತು: ಮಂಜುನಾಥ ಭಂಡಾರಿ
ಮAಗಳೂರು: ಧಾರ್ಮಿಕವಾಗಿ ಉತ್ತುಂಗದಲ್ಲಿರುವ ದ.ಕ. ಜಿಲ್ಲೆಯಲ್ಲಿ ಅಭಿವೃದ್ಧಿಗೆ ತೊಡಕಾಗಿರುವ ಅಂಶಗಳನ್ನು ಪರಿಗಣಿಸಿಕೊಂಡು ಸೂಕ್ತ ಪರಿಹಾರ ಕ್ರಮಗಳೊಂದಿಗೆ ಸಾಮಾಜಿಕ ಚಟುವಟಿಕೆಗಳ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಪರಿಕಲ್ಪನೆ ನನ್ನದಾಗಿದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ ಅಭಿಪ್ರಾಯಿಸಿದ್ದಾರೆ.
![](https://www.suddi9.com/wp-content/uploads/2024/09/WhatsApp-Image-2024-09-04-at-4.44.57-PM-650x240.jpeg)
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮರಸ್ಯ, ವಿಭಿನ್ನತೆಯ ನಾಡಾಗಿರುವ ದ.ಕ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು ಸೀಮಿತಗೊಂಡಿದ್ದು, ದೇಶದ ಮಹಾನಗರಳಲ್ಲಿ ಇರುವಂತಹ ರಾತ್ರಿ ಬದುಕಿನ ಪರಿಕಲ್ಪನೆಯೇ ಇಲ್ಲವಾಗಿದೆ. ಹೀಗಾಗಿ ಇಲ್ಲಿ ಬಹುರಾಷ್ಟಿçÃಯ ಕಂಪನಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿವೆ. ಇಲ್ಲಿ ಹೆಣ್ಣು ಗಂಡುಗಳು ಮಾತನಾಡುವುದು, ತಿನ್ನುವ ಆಹಾರ, ಧರಿಸುವ ಬಟ್ಟೆಯ ಮೇಲಿನ ನಿರ್ಬಂಧಗಳು ಹೊರ ರಾಜ್ಯ, ದೇಶಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡಾ ಇಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ.
![](https://www.suddi9.com/wp-content/uploads/2024/09/WhatsApp-Image-2024-09-04-at-4.44.38-PM-650x318.jpeg)
ಶಿಕ್ಷಣ ಹಬ್ ಆಗಿರುವ ಜಿಲ್ಲೆಯಲ್ಲಿ ಹಿಂದೆಲ್ಲಾ ಹೊರ ರಾಜ್ಯಗಳ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಿಯುಸಿ ಮೇಲಿನ ಹಂತದ ಶಿಕ್ಷಣಕ್ಕೆ ಹೊರ ರಾಜ್ಯಗಳ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದವರು ಹೇಳಿದರು.
ಇಂಜಿನಿಯರಿAಗ್, ಮೆಡಿಕಲ್, ನರ್ಸಿಂಗ್, ವೃತ್ತಿಪರ ಕಾಲೇಜು ಸೇರಿದಂತೆ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ಮಂದಿ ಶಿಕ್ಷಣ ಪಡೆಯುತ್ತಾರೆ. ಆದರೆ 9 ಗಂಟೆಯ ಬಳಿಕ ಐಸ್‌ಕ್ರೀಂ ಪಾರ್ಲರ್‌ಗಳು ಕೂಡಾ ಇಲ್ಲಿ ಬಾಗಿಲು ಮುಚ್ಚುತ್ತವೆ. ಹಾಗಾಗಿ ಇಲ್ಲಿ ಸುಮಾರು 200 ಎಕರೆ ಭೂಮಿಯನ್ನು ಖರೀದಿಸಿರುವ ವಿಪ್ರೋ ಸಂಸ್ಥೆಯವರು ತಮ್ಮ ಕಾರ್ಯಚಟುವಟಿಕೆ ಆರಂಭಿಸಲು ಮನಸ್ಸು ಮಾಡಿಲ್ಲ. ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಆಯ್ಕೆಯಾದರೂ ಮಂಗಳೂರಿನ ಬದಲು ಬೆಂಗಳೂರು ಅಥವಾ ಹೊರ ಜಿಲ್ಲೆ, ರಾಜ್ಯಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಆ ಮನಸ್ಥಿತಿಯನ್ನು ಬದಲಾಯಿಸಿ ಇಲ್ಲಿ ಐಟಿ ಕಂಪನಿಗಳು ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸುವ ಜತೆಗೆ ಮುಂದುವರಿದರಾಷ್ಟ್ರಗಳ ನಗರಗಳು ಇಲ್ಲಿನ ಸಂಸ್ಕೃತಿ, ಜಾನಪದ ಕ್ರೀಡೆಗಳನ್ನು ಅರಿತು ತಮ್ಮಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಪೂರಕ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಪಾನ್ ಮತ್ತು ಕೊರಿಯಾದ ನಗರಗಳ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುವ ಕಾರ್ಯ ನಡೆಸಿದ್ದಾರೆ.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಪಾನ್ ಸಂಸ್ಥೆಯು ಈಗಾಗಲೇ ಕ್ಯಾಂಪಸ್ ಸೆಲೆಕ್ಷನ್ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಿದ್ದು, ಈ ದಿಸೆಯಲ್ಲಿ ಕಾಲೇಜಿನಲ್ಲಿ ಜಪಾನ್ ಭಾಷಾ ಕಲಿಕೆಯ ಕೋರ್ಸ್ ಕೂಡಾ ಆರಂಭಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಸರಕಾರಿ ಮಟ್ಟದಲ್ಲಿ ನಡೆಸಲು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಮಂಜುನಾಥ ಭಂಡಾರಿ ಹೇಳಿದರು.
ಪಂಚಾಯತ್ ರಾಜ್ ವ್ಯವಸ್ಥೆಯಡಿ ಜನಪ್ರತಿನಿಧಿಗಳಿಗೆ ಸೂಕ್ತ ತರಬೇತಿ ನೀಡುವ ಕಾರ್ಯವನ್ನೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ 1000ದಷ್ಟು ವಿದ್ಯಾರ್ಥಿಗಳನ್ನು ಹೊಂದಿದ ಆದರೆ ಕುಸಿಯುವ ಹಂತದಲ್ಲಿದ್ದ ಕೋಡಿ ಬೆಂಗ್ರೆಯ ಶಾಲೆಯನ್ನು ನನ್ನ ಸ್ವಂತ ಹಣ ಹಾಗೂ ಉದ್ಯಮಿಗಳ ಸಹಕಾರದಲ್ಲಿ ಅಭಿವೃದ್ಧಿಗಾಗಿ ದತ್ತು ಪಡೆದಿದ್ದೆನೆ. ಬೆಂಜನಪದವಿನ ಸರಕಾರಿ ಶಾಲೆಯನ್ನೂ ದತ್ತು ಪಡೆದಿರುವುದಾಗಿ ಅವರು ಹೇಳಿದರು.
ಗ್ರಾಮ ಪಂಚಾಯತ್‌ಗಳ ಸರಕಾರಿ ಶಾಲೆ, ಪಂಚಾಯತ್ ಕಟ್ಟಡಗಳ ದುರಸ್ತಿ ಸೇರಿದಂತೆ ರಸ್ತೆ ಅಭಿವೃದ್ಧಿ ಹೊರತುಪಡಿಸಿ ಇತರ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಗ್ರಾ.ಪಂ. ಒಂದಕ್ಕೆ ತಲಾ 5 ಲಕ್ಷ ರೂ.ನಂತೆ ಆರು ವರ್ಷಗಳ ಅವಧಿಯಲ್ಲಿ 380 ಪಂಚಾಯತ್‌ಗಳಿಗೆ ಅನುದಾನ ಹಂಚಿಕೆಗೆ ನಿರ್ಧಾರ ಮಾಡಿರುವುದಾಗಿ ಮಂಜುನಾಥ ಭಂಡಾರಿ ಹೇಳಿದರು.
ಜಿಲ್ಲೆಯ ಬೀಚ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲು ಕೂಡಾ ಆದ್ಯತೆ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.