ಮಂಗಳೂರು: ಮಂಗಳೂರಿನಿಂದ ಅಮೆರಿಕಾಗೆ ತಲುಪಿದ ಗಣೇಶನ ವಿಗ್ರಹ
ವಿಘ್ನ ನಿವಾರಕ ಗಣಪತಿಯ ಹಬ್ಬವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸಲು ಸಿದ್ಧವಾಗಿದೆ. ಇನ್ನೂ ಗಣೇಶನ ಮೂರ್ತಿ ತಯಾರಿಸುವ ಕಲಾವಿದರ ಕೆಲಸ ಭರದಿಂದ ಸಾಗುತ್ತಿದೆ. ಈ ನಡುವೆ ಮಂಗಳೂರಿನಲ್ಲಿ ತಯಾರಿಸಲಾಗುವ ವಿಶೇಷ ಗಣೇಶನ ಮೂರ್ತಿಯೊಂದು ಅಮೇರಿಕಾಗೆ ಹಾರಿದೆ. ಹೌದು ಇಲ್ಲಿನ ಮಣ್ಣಗುಡ್ಡೆಯಲ್ಲಿ ಕುಟುಂಬವೊಂದು ಮಣ್ಣಿನಿಂದ ತಯಾರಿಸುವ ವಿಶೇಷ ಪರಿಸರ ಸ್ನೇಹಿ ಗಣೇಶನೇ ಪೂಜೆಗೆ ಬೇಕೆಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ಕುಟುಂಬವೊಂದು ಇಲ್ಲಿಂದ ಗಣಪತಿ ಮೂರ್ತಿಯನ್ನು ತರಿಸಿಕೊಂಡಿದೆ.
ಮಣ್ಣಗುಡ್ಡೆಯಲ್ಲಿನ ಒಂದೇ ಕುಟುಂಬದ ಸದಸ್ಯರು ಹಲವು ವರ್ಷಗಳಿಂದ ಗಣೇಶನ ಮೂರ್ತಿ ತಯಾರಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯದ್ದು 95ನೇ ವರ್ಷವಾಗಿದ್ದು, ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರು ಆರಂಭಿಸಿದ ಗಣಪತಿ ಮೂರ್ತಿ ತಯಾರಿಕೆಯ ಕಲೆಯನ್ನು ಇದೀಗ ನಾಲ್ಕನೇ ತಲೆಮಾರು ಮುಂದುವರೆಸಿಕೊಂಡು ಹೋಗುತ್ತಿದೆ. ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರ ಕುಟುಂಬ ವೃತ್ತಿಪರ ಕಲಾವಿದರಲ್ಲ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು. ಹೀಗಿದ್ದರೂ ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆಯಿಲ್ಲ ಎಂಬಂತೆ ಸುಂದರ ಗಣೇಶನ ಮೂರ್ತಿಗಳನ್ನು ಇವರು ತಯಾರಿಸುತ್ತಾರೆ.
ಅಂದಹಾಗೆ, ಈ ಕುಟುಂಬದವರು ಆವೆ ಮಣ್ಣಿನಿಂದಲೇ ತಯಾರಿಸಲಾದ ಪರಿಸರಸ್ನೇಹಿ ಗಣಪನನ್ನೇ ತಯಾರಿಸುತ್ತಾರೆ. ಈಗಾಗಲೇ ಮನೆಯಲ್ಲಿ ಬರೋಬ್ಬರಿ 260 ಗಣೇಶನ ಮೂರ್ತಿ ತಯಾರಿಸಲಾಗಿದೆ. ಜಿಲ್ಲೆಯಾದ್ಯಂತ ವಿವಿಧೆಡೆ ನಡೆಯುವ ಗಣೇಶೋತ್ಸವಕ್ಕೆ ಇಲ್ಲಿಂದಲೇ ಮೂರ್ತಿಗಳನ್ನು ಸಾಗಾಟ ಮಾಡಲಾಗುತ್ತಿದ್ದು, ಈ ಕುಟುಂಬದವರು ತಯಾರಿಸುವ ಪರಿಸರ ಸ್ನೇಹಿ ಗಣಪನ ಮೂರ್ತಿಗೆ ದೇಶ ವಿದೇಶಗಳಲ್ಲೂ ಬೇಡಿಕೆ ಇದೆ.