ಮೂಡುಬಿದರೆ: ಫೇಸ್ ಬುಕ್ನಲ್ಲಿ ಮಹೇಶ ಎಂಬ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು ಹಿಂದೂ ಸಂಘಟನೆಯ ಕಾರ್ಯಕರ್ತನಂತೆ ಕೇಸರಿ ಶಾಲು ಮತ್ತು ಕೈಗೊಂದು ನೂಲು ಕಟ್ಟಿಕೊಂಡ ಪೋಟೋ ಹಾಕಿ ಯುವತಿಯರನ್ನು ನಂಬಿಸುವ ಪ್ರೀತಿಸುವ ನಾಟಕವಾಡಿದ್ದ ಅನ್ಯಧರ್ಮಿಯ ಯುವಕನ್ನು ಸಂಘಟನೆಯವರು ಹಿಡಿದು ಗುರುವಾರ ಮೂಡುಬಿದರೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ವೃತ್ತಿಯಲ್ಲಿ ಇಲೆಕ್ಟ್ರಿಷನ್ ಆಗಿರುವ ಇನ್ಸಿಯಾಸ್ ಎಂಬಾತ ಡಿಜೆ ಆಪರೇಟರ್ ಎಂದು ಹೇಳಿ ತಿರುಗಾಡುತ್ತಿದ್ದು, ಮಹೇಶ ಎಂಬ ಹೆಸರಿನ ವಿಸಿಟಿಂಗ್ ಕಾರ್ಡ್ ಕೂಡಾ ಮಾಡಿಸಿ ಯುವತಿಯರಿಗೆ ಕಾರ್ಡ್ ನೀಡಿ ಸಂಪರ್ಕ ಬೆಳೆಸುತ್ತಿದ್ದ ಎನ್ನಲಾಗಿದೆ. ಯುವತಿಯರನ್ನು ನಂಬಿಸುವ ಉದ್ದೇಶದಿಂದಲೇ ಪೇಸ್ ಬುಕ್ನಲ್ಲಿಯೂ ಮಹೇಶ ಎಂಬ ಹೆಸರಿನ ಸುಳ್ಳು ಖಾತೆ ತೆರೆದು ಫೋಟೋ ಹಾಕುತ್ತಿದ್ದ. ಈಗಾಗಲೇ ಹಲವಾರು ಯುವತಿಯರು ಈತನ ಮೋಸದ ಬಲೆಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಈತನ ಉಪಟಳವನ್ನು ತಾಳಲಾರದೆ ಯುವತಿಯೋರ್ವಳು ಸಂಘಟನೆಯ ಕಾರ್ಯಕರ್ತರಿಗೆ ದೂರು ನೀಡಿದ್ದು, ಕಾರ್ಯಪ್ರವರ್ತರಾದ ಸಂಘಟನೆಯವರು ಮಹೇಶನನ್ನು ಹುಡುಕಾಡಿದಾಗ ಆತ ಇನ್ಸಿಯಾಸ್ ಎಂದು ಗೊತ್ತಾಗಿದೆ. ಈತನನ್ನು ಉಪಾಯದಿಂದ ಗುಟ್ಟಾಗಿ ಬರಮಾಡಿಕೊಂಡು ಧರ್ಮದೇಟು ನೀಡಿ ಪೋಲಿಸರಿಗೊಪ್ಪಿಸಿದ್ದಾರೆ. ಈ ಹಿಂದೊಮ್ಮೆ ಇನ್ಸಿಯಾಸ್ ಮಹೇಶ ಎಂಬ ಹೆಸರಲ್ಲಿ ಖಾತೆ ತೆರೆದಿದ್ದು ಸ್ಥಳೀಯರಿಗೆ ತಿಳಿದು ಬುದ್ದಿಮಾತು ಹೇಳಿ ಬಿಟ್ಟಿದ್ದರು ಎನ್ನಲಾಗುತ್ತಿದೆ.
