Published On: Sun, Aug 25th, 2024

ಬಂಟ್ವಾಳ: ನಾರಾಯಣ ಗುರುಗಳು ದೇಶದ ಆಸ್ತಿಯಾಗಬೇಕಾದರೆ ಎಲ್ಲಾ ಜಾತಿ  ಸಂಘಟಿತವಾಗಬೇಕು: ಕೆ.ಹರಿಕೃಷ್ಣ ಬಂಟ್ವಾಳ

ಗಾಣದಪಡ್ಪು: ಜಾತಿಯಿಂದ ಬದುಕು ಕಟ್ಟಲು ಸಾಧ್ಯವಿಲ್ಲ, ಸನಾತನ ಹಿಂದೂ ಧರ್ಮ ಉಳಿದರೆ ಮಾತ್ರ ಭಾರತ ಉಳಿಯಲಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ದೇಶದ ಸಮಸ್ತರ ಆಸ್ತಿಯಾಗಬೇಕಾದರೆ ಎಲ್ಲಾ ಜಾತಿ ಸಂಘಟನೆಯು ಸಂಘಟಿತರಾಗಬೇಕು ಎಂದು ಬಿಲ್ಲವ ಮುಖಂಡ, ಸಂಘದ ಮಾಜಿ ಅಧ್ಯಕ್ಷ  ಕೆ.ಹರಿಕೃಷ್ಣ ಬಂಟ್ವಾಳ್ ಅವರು ಹೇಳಿದ್ದಾರೆ.

ಅವರು ಇಂದು (ಆ.25) ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ‌ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ(ರಿ.)ಇದರ ಆಶ್ರಯದಲ್ಲಿ  ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಸಭಾಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

೧೯ನೇ ಶತಮಾನದಲ್ಲಿ ಇಬ್ಬರು ಶ್ರೇಷ್ಠ ದಾರ್ಶನಿಕರಾದ  ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಸ್ವಾಮಿ ವಿವೇಕಾನಂದರ ಜನನ ಭಾರತದಲ್ಲಿ ಆಗಿದೆ, ಮನುಷ್ಯ  ವಿದ್ಯಾವಂತನಾದರೆ ಜಗತ್ತಿನ ದಾರಿಯ ಬೆಳಕು ಕಾಣುತ್ತದೆ ಎಂದು ನಾರಾಯಣ ಗುರುಗಳು ಹೇಳಿದ್ದಾರೆ,  ನಾರಾಯಣ ಗುರು ಜಾತಿ ಸಂಘಟನೆಯನ್ನು ಮಾಡಿದವರಲ್ಲ,  ಪರಸ್ಪರ ಸಂಘಟಿತರಾಗಿ ಬಲಯುತರಾಗುವಂತೆ ತಿಳಿಸಿದವರು,  ಏಷ್ಯಾ ಖಂಡದಲ್ಲಿ ಪ್ರಥಮ ಸರ್ವಧರ್ಮ ಸಮ್ಮೇಳನವನ್ನು ಸಂಘಟಿಸಿ ಮತಾಂತರವನ್ನು ತಡೆದರು. ಅದ್ವೈತ್ವ ತತ್ವನ್ನು ಜಗತ್ತಿಗೆ ಮೊದಲು ನೀಡಿದವರು ಎಂದರು.

ಚರಿತ್ರೆ ತಿಳಿಯದವ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಬೆವರು ಹರಿಸಿದರೆ ಮಾತ್ರ ಚರಿತ್ರೆ ಸೃಷ್ಟಿಸ ಬಹುದು ಎಂದ ಅವರು ಮುಂದಿನ ದಿನಗಳಲ್ಲಿ ನಾರಯಣ ಗುರುಗಳ ಆಶಯದಂತೆ ಎಲ್ಲ ಸಮುದಾಯದವರನ್ನು ಸೇರಿಸಿ ಸಮಿತಿಯನ್ನು ರಚಿಸಿ ಆ ಮೂಲಕ ನಾರಾಯಣಗುರು ಜಯಂತಿಯ ಆಚರಣೆಯಾಗಬೇಕು ಎಂದರು.

ಬಿಲ್ಲವರು ಬ್ರಿಟಿಷ್, ಮೊಗಲರ ಸಂತತಿಯವರಲ್ಲ, ಸನಾತನ ಹಿಂದೂಧರ್ಮದ ಪ್ರತಿಪಾದಕರಾಗಿದ್ದಾರೆ ಎಂದು ಹೇಳಿದ ಅವರು 2047 ಕ್ಕೆ ಭಾರತ ವಿಕಸಿತ ಭಾರತವಾಗುವ‌ ಮೂಲಕ ವಿಶ್ವಗುರುವಾಗಲಿದೆ. ಈನಿಟ್ಟಿನಲ್ಲಿ ದೇಶದ  ಎಲ್ಲಾ ಸಂಘಟನೆಗಳು ಒಂದಾಗಬೇಕಾದ ಕಾಲ ಸನ್ನಿಹತವಾಗಿದೆ ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಪದವು ಶಾಲೆಯ ಪದವೀಧರ ಶಿಕ್ಷಕಿ ಆರತಿ ದಾಸಪ್ಪ ಪೂಜಾರಿ ನಾರಾಯಣ ಗುರುಗಳ ಸಂದೇಶವನ್ನು ಮಕ್ಕಳಿಗೆ ನೀಡುವ ಕಾರ್ಯ ಬಂಟ್ವಾಳ ಬಿಲ್ಲವ ಸಂಘದಿಂದ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಕಾಲ ಹಾಳಾಗಿಲ್ಲ ಬದಲಾಗಿ ಯುವಕರಿಗೆ ಮಾರ್ಗದರ್ಶನದ ಕೊರತೆಯಿದೆ. ಮಕ್ಕಳು ಹೆಚ್ಚು ಹೆಚ್ಚು, ಅಧ್ಯಯನ, ಚಿಂತನಾಶೀಲರಾಗಬೇಕು, ಆತ್ಮವಿಶ್ವಾಸವನ್ನು ಬೆಳಸಿಕೊಳ್ಳಬೇಕು, ರಾಷ್ಟ್ರ ಭಕ್ತಿಯನ್ನು ಮೈಗೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭಾಧ್ಯಕ್ಷ ವಾಸು ಪೂಜಾರಿ ಹಾಗೂ ಯೋಜನಾ ಪ್ರಾಧಿಕಾರದ ಅಧ್ಯಕ್ಷ  ಬೇಬಿ ಕುಂದರ್ ಅವರನ್ನು ಸನ್ಮಾನಿಸಲಾಯಿತು.  ಶೈಕ್ಷಣಿಕ ಕ್ಷೇತ್ರದ ಸಾಧಕ  ಪ್ರಜ್ವಲ್, ಕ್ರೀಡಾ ಕ್ಷೇತ್ರದ ಸಾಧಕರಾದ  ಸಿದ್ದಾರ್ಥ್ ಎಂ.ಸಿ. , ರಕ್ಷಾ ಜಿ.,  ಶರಣ್ಯ, ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು. ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಇತ್ತೀಚೆಗೆ ನಿಧನರಾದ ಉಮೆಶ್ ಸುವರ್ಣ ತುಂಬೆ ಅವರ ಸಂಸ್ಮರಣೆ ಮಾಡಿದರು.

ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಜೊತೆ ಕಾರ್ಯದರ್ಶಿ ರಾಜೇಶ್ ಸುವರ್ಣ ಮಿತ್ತಬೈಲು, ಲೆಕ್ಕಪರಿಶೋಧಕ ಹೇಮಂತ್ ಕುಮಾರ್ ಮೂರ್ಜೆ, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಶೈಲಜಾ ರಾಜೇಶ್ ವೇದಿಕೆಯಲ್ಲಿದ್ದರು.ಮಾಜಿ ಶಾಸಕ ಎ.ರುಕ್ಮಯಪೂಜಾರಿ, ಸಜೀಪಮುನ್ನೂರು ಮೂರ್ತೆದಾರರ ಸೇ.ಸ.ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರಮೇಶ್ ತುಂಬೆ ಸ್ವಾಗತಿಸಿದರು. ಕೋಶಾಧಿಕಾರಿ ಆನಂದ ಸಾಲ್ಯಾನ್ ಶಂಭೂರು ವಂದಿಸಿದರು. ಯತೀಶ್ ಶಂಭೂರು ಹಾಗೂ ಶ್ರೀನಿವಾಸ ಪೂಜಾರಿ ಮೆಲ್ಕಾರ್  ಕಾರ್ಯಕ್ರಮ ನಿರೂಪಿಸಿದರು. ಇನ್ನು ಇದಕ್ಕೂ ಮುನ್ನ ಮೊದಲು ಬೆಳಿಗ್ಗೆ ಗುರುಪೂಜೆಯ ಬಳಿಕ ಮಹಾಪೂಜೆ, ಅನ್ನಸಂತರ್ಪಣೆ,  ಹಾಗೂ  ಬಂಟ್ವಾಳ ತಾಲೂಕು ಬಿಲ್ಲವ ಸಂಘ, ಬಿಲ್ಲವ ಮಹಿಳಾ ಸಮಿತಿ ಹಾಗೂ ಯುವವಾಹಿನಿ(ರಿ.) ಬಂಟ್ವಾಳ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter