Suddi9 Special : ಪೊಳಲಿ ಸೇತುವೆಗೆ 60 ವರ್ಷದ ಇತಿಹಾಸ, ಇದನ್ನು ನಿರ್ಮಾಣ ಮಾಡಿದ್ದು ಯಾರು?

ಮಳೆಯಿಂದಾದ ಹಾನಿಯಿಂದ ರಾಜ್ಯದ ಜನರು ಸುಧಾರಿಸಿಕೊಳ್ಳುವ ಹೊತ್ತಿಗೆ ಮತ್ತೊಂದು ಸಮಸ್ಯೆಯೂ ಎದುರಾಗಿದೆ. ರಾಜ್ಯದ ಬಹುತೇಕ ಹಳೆಯ ಸೇತುವೆಗಳು ಕುಸಿದು ಬೀಳುವ ಹಂತದಲ್ಲಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಯ ಸೇತುವೆಯೂ ಕುಸಿದು ಬಿದ್ದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಿಸುಮಾರುಹತ್ತು ಸೇತುವೆಗಳಲ್ಲಿ ಸಂಚಾರ ನಿರ್ಬಂಧಿಸಿ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ ಈಗಾಗಲೇ ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಹಳೆಯ ಸೇತುವೆಯಾದ ಈ ಅಡ್ಡೂರು ಸೇತುವೆ ಸಂಚಾರ ಬಂದ್ ಮಾಡಲಾಗಿದೆ. ಬಿಸಿರೋಡ್ ನಿಂದ ಪೊಳಲಿ ಮಾರ್ಗವಾಗಿ ಮಂಗಳೂರು ಹಾಗೂ ಬಜ್ಪೆ ಮೂಡಬಿದ್ರಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಪೊಳಲಿ ಸೇತುವೆ ಇದಾಗಿದ್ದು, ಈಗಾಗಲೇ ಇಲ್ಲಿನ ಸುತ್ತ ಮುತ್ತಲಿನ ಜನರು ಓಡಾಟಕ್ಕಾಗಿ ಈ ಅಡ್ಡೂರು ಸೇತುವೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಸದ್ಯಕ್ಕೆ ಪೊಳಲಿ ಸಮೀಪದ ಅಡ್ಡೂರು ಸೇತುವೆಯ ದುರಸ್ಥಿ ಕಾರ್ಯವು ನಡೆಯುತ್ತಿದ್ದು, ಘನ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಸೇತುವೆಯನ್ನೇ ಅವಲಂಬಿಸಿಕೊಂಡವರಿಗೆ ಪರ್ಯಾಯ ಮಾರ್ಗವಾಗಿ ಮಲ್ಲೂರು ರಸ್ತೆಯ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.
60 ವರ್ಷದ ಇತಿಹಾಸವಿರುವ ಅಡ್ಡೂರು ಸೇತುವೆ
1964 ರಲ್ಲಿ ಜ್ಯೋತಿ ಕನ್ಸ್ಟ್ರಕ್ಷನ್ ಕಂಪೆನಿಯ ದಾಮೋದರ ಸುವರ್ಣನವರು ಈ ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಆದಾದ ಬಳಿಕ ಎರಡು ವರ್ಷಗಳ ನಂತರದಲ್ಲಿ ಅಂದರೆ 1966 ರಲ್ಲಿ ಕವಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಹಿತಿ ನೀಡುತ್ತಿದ್ದ ಬಡಕಬೈಲು ಪರಮೇಶ್ವರಯ್ಯ ಅವರು ಈ ಸೇತುವೆಗೆ ರಸ್ತೆ ನಿರ್ಮಾಣ ಮಾಡಿದ್ದರು. ಆದರೆ ಈ ಸೇತುವೆ ನಿರ್ಮಾಣಕ್ಕೂ ಮೊದಲು ಇಲ್ಲಿನ ಜನರು ದೋಣಿಯನ್ನೇ ಅವಲಂಬಿಸಿಕೊಂಡಿದ್ದರು. ಉದ್ದಬೆಟ್ಟುವಿನಿಂದ ಮಾಧವ ಭಟ್ ಯವರ ಮನೆಯವರೆಗೆ ಹಾಗೂ ಕೋಡಿ ಬೆಟ್ಟುವಿನಿಂದ ಹನುಮಂತ ದೇವಸ್ಥಾನದವರೆಗೆ ಎರಡು ಕಡೆಗಳಲ್ಲಿ ದೋಣಿ ವ್ಯವಸ್ಥೆಯಿತ್ತು. ಗುರುಪುರ ಹಾಗೂ ಪೆರ್ಮಯಿ ಪ್ರದೇಶಗಳಿಗೆ ತೆರಳಲು ಈ ದೋಣಿ ಬಿಟ್ಟರೆ ಬೇರೆ ಯಾವ ವ್ಯವಸ್ಥೆಯಿರಲಿಲ್ಲ. ಗುರುಪುರ ಸೇತುವೆಯಿಂದ ಮಂಗಳೂರಿಗೆ ನಡೆದುಕೊಂಡೇ ಹೋಗುತ್ತಿದ್ದರು. ಇಲ್ಲದಿದ್ದರೆ ಪೆರ್ಮಯಿ ಪ್ರದೇಶದಿಂದ ಕುಡುಪು ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದರು.

ಅಕ್ರಮ ಮರಳುಗಾರಿಕೆಯಿಂದ ಸೇತುವೆ ಶಿಥಿಲ ಶಾಸಕ ಡಾ. ವೈ.ಭರತ್ ಶೆಟ್ಟಿ
ಇತ್ತ ಶಾಸಕ ಡಾ. ವೈ.ಭರತ್ ಶೆಟ್ಟಿಯವರು ಪೊಳಲಿ ಕ್ಷೇತ್ರವನ್ನು ಸಂಪರ್ಕಿಸುವ ಅಡ್ಡೂರು ಸೇತುವೆ ಶಿಥಿಲಗೊಳ್ಳಲು, ಅದರಡಿ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆಯೇ ಕಾರಣ. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಈ ಬಗ್ಗೆ ಗಮನ ಹರಿಸಬೇಕು. ಹೀಗೆ ನಡೆದರೆ ಮುಲ್ಲರಪಟ್ಣದ ಸೇತುವೆ ಕುಸಿತದಂತೆ ಈ ಅಡ್ಡೂರು ಸೇತುವೆಯೂ ಕುಸಿಯಬಹುದು. ಅಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ಕಡಿವಾಣ ಹಾಕದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಚ್ಚರಿಸಿದ್ದಾರೆ.
ಅಡ್ಡೂರು ಸೇತುವೆ ಪರಿಶೀಲನೆಗೆ ಬಂದ ಜಿಲ್ಲಾಧಿಕಾರಿ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇಂದು (ಆ.23) ಪೊಳಲಿಯ ಅಡ್ಡೂರು ಸೇತುವೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪ್ರತಿನಿಧಿಗಳ ಹಾಗೂ ಧಾರ್ಮಿಕ ಮುಖಂಡರ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಮಾತನಾಡಿದ ಡಿಸಿ ಮುಲ್ಲೈ ಮುಗಿಲನ್, ‘ಸೋಮವಾರ ಅಥವಾ ಮಂಗಳವಾರ ಬ್ರಿಡ್ಜ್ ಸಾಮರ್ಥ್ಯ ಪರೀಕ್ಷಾ ಮಿಷನ್ ಬರುತ್ತದೆ. ಇನ್ನು ಮಂಗಳೂರಿನ ಕೆಲವೊಂದು ಸೇತುವೆಗಳ ಸಾಮರ್ಥ್ಯವನ್ನು ಪರೀಕ್ಷೆ ಮಾಡಲಿದೆ. ಇನ್ನು ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗುವುದು, ಅಕ್ರಮ ಮರಳು ಸಾಗಣೆಗಳನ್ನು ನಿಲ್ಲಸಬೇಕು. ಇನ್ನು ಬ್ರಿಡ್ಜ್ ಸಾಮರ್ಥ್ಯ ಪರೀಕ್ಷಾ ಮಿಷನ್ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಜನರ ಓಡಾಟಕ್ಕಾಗಿ ಉಚಿತ ವಾಹನದ ವ್ಯವಸ್ಥೆ
ಅಡ್ಡೂರು ಸೇತುವೆಯ ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಜನರ ಸದುಪಯೋಗಕ್ಕಾಗಿ ಉಚಿತ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಾಹನವನ್ನು ಇಂದು (ಆ.23) ಮಾನ್ಯ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಯವರು ಲೋಕಾರ್ಪಣೆ ಮಾಡಿದ್ದಾರೆ. ಪೊಳಲಿ ಶ್ರೀ ದೇವಿಯ ಭಕ್ತಾದಿಗಳಿಗೆ ಹಾಗೂ ಊರ ಜನರ ಸದುಪಯೋಗಕ್ಕಾಗಿ ಪೊಳಲಿಯಿಂದ ಅಡ್ಡೂರು ತನಕ ಸೇತುವೆ ದುರಸ್ತಿಯವರೆಗೆ ಉಚಿತ ವಾಹನದ ವ್ಯವಸ್ಥೆಯೂ ಜನರಿಗೆ ಪ್ರಯೋಜನವಾಗಲಿದೆ.
