
ಕೈಕಂಬ: ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆಯನ್ನು ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿಕೊಂಡವರೇ ಹೆಚ್ಚಾಗಿದ್ದಾರೆ. ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಜನರ ಸದುಪಯೋಗಕ್ಕಾಗಿ ಉಚಿತ ವಾಹನದ ವ್ಯವಸ್ಥೆಯನ್ನು ಶಾಸಕ ರಾಜೇಶ್ ನಾಯ್ಕ್ ಮಾಡಿದ್ದಾರೆ. ಇಂದು ಬೆಳಿಗ್ಗೆ ಪೊಳಲಿ ದೇಗುಲದ ಮುಂಭಾಗದಲ್ಲಿ, ಅರ್ಚಕರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮಿನಿ ಬಸ್ಗೆ ರಾಜೇಶ್ ನಾಯ್ಕ್ ಉಳಿಪಾಡಿಯವರು ಚಾಲನೆ ನೀಡಿದ್ದಾರೆ.
ಪೊಳಲಿ ಶ್ರೀ ದೇವಿಯ ಭಕ್ತಾದಿಗಳಿಗೆ ಹಾಗೂ ಊರ ಜನರ ಸದುಪಯೋಗಕ್ಕಾಗಿ ಪೊಳಲಿಯಿಂದ ಅಡ್ಡೂರು ತನಕ ಸೇತುವೆ ದುರಸ್ತಿಯವರೆಗೆ ಉಚಿತ ವಾಹನದ ವ್ಯವಸ್ಥೆಯೂ ಜನರಿಗೆ ಪ್ರಯೋಜನವಾಗಲಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಡ್ಡೂರು ಪೊಳಲಿ ಪಲ್ಗುನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ಕಾರಣ ಘನ ವಾಹನಗಳ ಸಂಚಾರ ವನ್ನು ನಿಷೇಧಿಸುವ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನಲೆಯಲ್ಲಿ ಸಾರ್ವಜನಿಕರು ಗೊಂದಲಕ್ಕೆ ಸಿಲುಕಿದ್ದರು. ಕೊನೆಗೆ ಜಿಲ್ಲಾಧಿಕಾರಿ, ತಜ್ಞರು ಹಾಗೂ ಶಾಸಕರು ಈ ಗೊಂದಲವನ್ನು ನಿವಾರಿಸುವಂತಹ ಕೆಲಸ ಮಾಡಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ ವೆಂಕಟೇಶ್ ನಾವಡ, ಜನರ ಕಷ್ಟವನ್ನು ಅರಿತು ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರು ಒಂದು ಮಿನಿ ಬಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಅಡ್ಡೂರಿನಿಂದ ಪೊಳಲಿಗೆ ಮಾತ್ರ ಇರುತ್ತದೆ. ಇದು ಕೆಲಸಕ್ಕೆ ಹೋಗುವವರಿಗೆ, ವಿದ್ಯಾರ್ಥಿಗಳಿಗೆ, ಪೊಳಲಿಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ನಾವು ರಾಜೇಶ್ ನಾಯ್ಕ್ ಅವರಿಗೆ ಹೇಳಿದ ತಕ್ಷಣ ಈ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು. ವಾಹನದ ಸಂಪೂರ್ಣ ಜವಾಬ್ದಾರಿಯನ್ನು ಎಸ್. ಆರ್. ಫ್ರೆಂಡ್ಸ್ ಪೊಳಲಿ ವಹಿಸಿಕೊಂಡಿದ್ದಾರೆ. ವಾಹನದ ಕೀ ಹಸ್ತಾoತರಿಸಿದರು.

ಇನ್ನು ಕಾರ್ಯಕ್ರಮದಲ್ಲಿ , ವೆಂಕಟೇಶ್ ನಾವಡ ಪೊಳಲಿ ,ಭುವನೇಶ್ ಪಚಿನಡ್ಕ, ಚಂದ್ರಹಾಸ ಪಲ್ಲಿಪಾಡಿ, ಸುಕೇಶ್ ಚೌಟ, ಚಂದ್ರಶೇಖರ್ ಶೆಟ್ಟಿ, ಲೋಕೇಶ್ ಭರಣಿ, ಯಶಂವತ್ ಕೊಟ್ಯಾನ್ ಪೊಳಲಿ, ಸುಬ್ರಾಯ ಕಾರಂತ್ , ಕುಮಾರ್ ಪೊಳಲಿ, ಯಶೋಧರ ಪೊಳಲಿ ಕಲ್ಕುಟ , ಸಚಿನ್ ಅಡಪ, ಹರೀಶ್ ಬಳ್ಳಿ ಗುರುಪುರ, ಅಶೋಕ್ ಬಡ್ಕಬೈಲ್, ಸುರೇಶ್ ಮಣಿಕಂಠಪುರ , ಸಂದೀಪ್ ಪೊಳಲಿ, ಕಾರ್ತಿಕ್ ಬಳ್ಲಾಲ್, ಸಂತೋಷ್ ಮಣಿಕಂಠಪುರ , ಜಯಶ್ರೀ ಕರ್ಕೇರ , ಚಂದ್ರವತಿ ಪೊಳಲಿ ವಾಮನ ಆಚಾರ್ಯ , ರೋಶನ್ ಗರೋಡಿ, ನವೀನ್ ಪೊಳಲಿ ಮತ್ತಿತರರು ಭಾಗವಹಿಸಿದರು.
